Wednesday, February 13, 2019

ನಾವು ಸಮಯ ನುಂಗದ, ಗಂಟೆಗಟ್ಟಲೆ ಕೊರೆಯದ ನಿರೂಪಕರು: ಬಾನುಲಿಯ ಬಾನಾಡಿಗಳು!


ಸಾಮಾನ್ಯವಾಗಿಆಡಿಯೋಎಂಬ ಶಬ್ದ ಹೆಚ್ಚು  ಬಳಕೆಯಾಗುವುದು ಮತ್ತು ಕೇಳಿ ಬರುವುದು ರೇಡಿಯೋ ಮಾಧ್ಯಮದ ಕಾರ್ಯಕ್ಷೇತ್ರದಲ್ಲಿ ಮಾತ್ರ .ಆದರೆ  ಪ್ರಸ್ತುತ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ  ಆಡಿಯೋ ಸುದ್ದಿ ಜೋರಾಗಿ ಕೇಳಿ ಬರುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ನಡುವೆ ವಿಶ್ವ ರೇಡಿಯೋ ದಿನ ಬಂದದ್ದು ಗೊತ್ತೇ ಆಗಿಲ್ಲ ನೋಡಿ!

ಸಾಮಾನ್ಯವಾಗಿ ರೇಡಿಯೋ ನಿರೂಪಕರು ಯಾವುದಾದರು  ಸಾರ್ವಜನಿಕ ಕಾರ್ಯಕ್ರಮಕ್ಕೆ ಹೋದಾಗ ಹಲವು ಜನ ಕುತೂಹಲದಿಂದ ಗಮನಿಸುವುದುಂಟು. ಸ್ವಲ್ಪ ಕಡಿಮೆ ಮಾತನಾಡಿ  ಎನ್ನುವವರೂ ಇದ್ದಾರೆ. ಒಂದು ಸಂತೋಷವೆಂದರೆ ನಾನು ಗಮನಿಸಿದ ಹಾಗೆ  ರೇಡಿಯೋ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುವ ಅಥವಾ ಮಾತನಾಡುವ ಅವಕಾಶ ಸಿಕ್ಕಾಗ ಗಂಟೆಗಟ್ಟಲೆ ಕೊರೆಯುವುದಿಲ್ಲ, ಮತ್ತೊಬ್ಬರ ಸಮಯವನ್ನು ನುಂಗುವುದಿಲ್ಲ,  ವಿಷಯಾಂತರ ಮಾಡುವುದಿಲ್ಲ . ಇದಕ್ಕೆ ಒಂದು  ಕಾರಣವೂ ಇದೆ ಎನ್ನಬಹುದು. ಅದೇನೆಂದರೆ ನಾವು ನಮ್ಮ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿಷಯ ಬರೆಯುವಾಗ ಹೆಚ್ಚಾದಾರೆ ಕತ್ತರಿ ಪ್ರಯೋಗ ಮಾಡುತ್ತೇವೆ. ಕಡಿಮೆಯಾದರೆ ಪೂರಕ ವಿಷಯ ವಿವರಣೆಯೊಂದಿಗೆ ಸಮಯಕ್ಕೆ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಹಾಗಾಗಿ ಮಾತಿನಲ್ಲಿಯೂ ಹಿಡಿತ ಸಾಧಿಸಲು ಪ್ರಯತ್ನಿಸುತ್ತೇವೆ.

 ನಮ್ಮ ಪ್ರತಿಯೊಂದು ಕಾರ್ಯಕ್ರಮಗಳಿಗೆ ನಿರ್ದಿಷ್ಟ  ಸಮಯದ ಮಿತಿ ಇರುವುದರಿಂದ ಅಷ್ಟೇ ಸಮಯದೊಳಗೆ ಕಾರ್ಯಕ್ರಮ ಮುಗಿಸಬೇಕಾಗುತ್ತದೆ . ಗಣ್ಯ ವ್ಯಕ್ತಿ ಇರಲಿ ,ಸಾಮಾನ್ಯ ವ್ಯಕ್ತಿ ಇರಲಿ  ನೇರ ಪ್ರಸಾರ ಅಥವಾ ಧ್ವನಿ ಮುದ್ರಿತ ಪ್ರಸಾರದಲ್ಲಿ ಹಲವು ಬಾರಿ ಮಾತುಗಳಿಗೆ ಕತ್ತರಿ ಪ್ರಯೋಗವನ್ನು ಮಾಡುವ ಮೂಲಕ ನಿಗದಿತ ಸಮಯದೊಳಗೆ ಕಾರ್ಯಕ್ರಮವನ್ನು ಬಿತ್ತರಿಸುತ್ತೆವೆ .
ಸಾಮಾಜಿಕ ಜಾಲತಾಣದಲ್ಲಿ ನಿರೂಪಕರಿಗೆ ಅಭಿಮಮಾನಿಗಳ ಬಳಗ!

 ರೇಡಿಯೋ ನಿರೂಪಕರೆಂದರೆ   ಒಂದು ಕಾಲಕ್ಕೆ ಧ್ವನಿಯಲ್ಲಿಯೇ ಪರಿಚಿತ ಹೊರತು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಿಲ್ಲ,ಜೊತೆಗೆ ಅಂತಹ ವ್ಯವಸ್ಥೆಗಳು ಸಕಾಲದಲ್ಲಿ ಇರಲಿಲ್ಲ. ಬದಲಾದ ಕಾಲಘಟ್ಟದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ರೇಡಿಯೋ ನಿರೂಪಕರು ಜನ ಸಾಮಾನ್ಯರಿಗೂ ಕಾಣಸಿಗುತ್ತಾರೆ.ಇಂದು ಫೇಸ್ ಬುಕ್ ನಲ್ಲಿ ಹಲವು ನಿರೂಪಕರು ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.

ಇಡೀ ದಿನಾ ರೇಡಿಯೋದಲ್ಲಿ ಮಾತನಾಡುತ್ತಿರಾ?!

ರೇಡಿಯೋ ಕ್ಷೇತ್ರದ ಪರಿಚಯ ಇರುವ ಮತ್ತು ಅದರ ಬಗ್ಗೆ ತಿಳಿದಿರುವ ಹಾಗೂ ರೇಡಿಯೋ ಕೇಳುವ ಹವ್ಯಾಸ ಬೆಳೆಸಿಕೊಂಡಿರುವ , ಸದಾ ಒಟನಾಟ ಇರುವ ಜನರಿಗೆ ಇದರ ಸ್ಥೂಲ ಪರಿಚಯ ಇರುತ್ತದೆ.ಹಾಗಾಗಿ ನಮ್ಮ ಕೆಲಸ ಏನು ಎಂಬುದು ತಿಳಿದಿರುತ್ತಾರೆ. ಆದರೆ ಬಹುತೇಕರು ರೇಡಿಯೋ ಒಳಗೆ ಕೆಲಸ ಏನಿದೆ ಎಂದು ಕೇಳಿದರೆ, ಇನ್ನು ಕೆಲವರು ಇಡೀ ದಿನಾ ಮಾತನಾಡುತ್ತಿರಾ?  ಎಂದು ಕೇಳುವವರಿದ್ದಾರೆ.  ಮತ್ತೆ ಕೆಲವರು ರೇಡಿಯೋ ಕೇಳುವವರು ಈಗ ಇದ್ದಾರಾ? ಎಂದು ಪ್ರಶ್ನಿಸಿದರೆ ಮತ್ತೆ ಕೆಲವರು ಏನೆಲ್ಲ ಮಾತನಾಡುತ್ತಿರಾ ಎಂದು ಕೇಳುತ್ತಾರೆ. ಆದರೆ  ನಾವು ಪುಸ್ತಕಗಳನ್ನು ಓದುತ್ತೇವೆ, ಭಾಷಣಗಳನ್ನು ಕೇಳುತ್ತೇವೆ , ಕಾರ್ಯಕ್ರಮಕ್ಕೆ ತಯಾರಿ ಮಾಡುತ್ತೇವೆ, ನಮ್ಮದೇ ಕಾರ್ಯಕ್ರಮವನ್ನು ನಾವೇ ಕೇಳುತ್ತೇವೆ , ರೇಡಿಯೋ ನಿಲಯದ ಒಟ್ಟು ಕಾರ್ಯಕ್ರಮದ ರೂಪುರೇಷೆಯೊಳಗಿನ ಕೆಲಸಲ್ಲಿ ಭಾಗಿಯಾಗಿರುತ್ತೇವೆ ಎಂಬುದು ಹಲವರಿಗೆ ಗೊತ್ತೇ ಇಲ್ಲವೆಂದು ಅನಿಸುತ್ತದೆ.

ಅಪರಿಚಿತ ಕೇಳುಗರ ಜೊತೆ ಜಗಳ!
ಆಕಾಶವಾಣಿ ನನ್ನ ರೇಡಿಯೋ ಜೀವನದ ಮೊದಲ ಪಾಠ ಶಾಲೆ. ಬಳಿಕ ನಾನು ಮಂಗಳೂರಿನ  ರೇಡಿಯೋ ಸಾರಂಗ್ ನಲ್ಲಿ ಸುಮಾರು ಐದು ವರ್ಷ ಕೆಲಸ ಮಾಡಿಡಿದ್ದೆ. ಅಲ್ಲಿ  ತುಳು ಚಾವಡಿ,ಜನದನಿ, ಒಲವಿನಹಾಡು ಇತ್ಯಾದಿ ಜನ ಮೆಚ್ಚುಗೆಯ ಕಾರ್ಯಕಮ ನಡೆಸಿಕೊಟ್ಟಿದ್ದೆ. ಬಹುತೇಕ  ಕೆಳುಗರು ಸಾವಧಾನದಿಂದ ಆಲಿಸಿದರೆ, ಇನ್ನು ಕೆಲ ಕೇಳುಗರು ಕಿರಿಕ್ ಪಾರ್ಟಿಯಾಗಿದ್ದರು! ಲೈನ್ ಸಿಗದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದರೆ ಇನ್ನು ಕೆಲವರು ನಮ್ಮ ಕರೆ ಮಾತ್ರ ಸ್ವೀಕರಿಸುವುದಿಲ್ಲ ಎಂಬ ವಾದವನ್ನು ಮಾಡಿದ್ದರು.. ಮಂಗಳೂರು ಸಮೀಪದ ಯುವತಿಯೊಬ್ಬರು  ಸುಮಾರು ಎರಡು ವರ್ಷದಷ್ಟು ನನ್ನ ನೇರ ಪ್ರಸಾರ ಕಾರ್ಯಕ್ರಗಳಿಗೆ ಅಡಚಣೆ ಮಾಡಿದ್ದು ಮರೆಯಲು ಅಸಾಧ್ಯ. ಅಪರಿಚಿತ ಕೇಳುಗರು ನಮ್ಮ ಮೇಲೆಯೇ ಸವಾರಿ ಮಾಡಿದಾಗ ನಾನು ಕೋಪಗೊಂಡದ್ದು ಮಾತ್ರವಲ್ಲದೆ ಜಗಳವೂ ಮಾಡಿದ್ದು ಇದೆ!

ಸದ್ಯ ಉಜಿರೆಯಲ್ಲಿ ಮತ್ತೆ ರೇಡಿಯೋ ಜೀವನ ಮುಂದುವರಿಸಿದ್ದು, ಎಸ್.ಡಿ. ಎಂ  ಸಂಸ್ಥೆಯ ಅಧೀನದಲಿರುವ ರೇಡಿಯೋ ನಿನಾದ90.4 FM  ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.   ನಾವು ರೇಡಿಯೋ ನಿರೂಪಕರು. ಸಮಯ ನುಂಗದ, ಗಂಟೆಗಟ್ಟಲೆ  ಕೊರೆಯದ, ಬಾನುಲಿಯ ಬಾನಾಡಿಗಳು!  –ವಿ.ಕೆ ಕಡಬ


Saturday, September 22, 2018

ತರ್ಜುಮೆಯಲ್ಲಿ ಜೀವ ಕಳೆದುಕೊಳ್ಳುತ್ತಿರುವ ಕನ್ನಡ ಶಬ್ದಗಳು: ಇಲ್ಲಿ ಮೂತ್ರ ತೇರ್ಗಡೆ ಹೊಂದಿಲ್ಲ!


ಪ್ರತಿ ವರ್ಷವೂ ಸರಕಾರ ನವೆಂಬರ್ ಮೊದಲ ದಿನ ರಾಜೋತ್ಸವವನ್ನು ವಿಜ್ರಂಭಣೆಯಿಂದ  ಆಚರಣೆ  ಮಾಡುವುದಲ್ಲದೆ  ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತ ಬರುತ್ತಿದೆ.  ಆದರೆ ರಾಜ್ಯದ ಕೆಲ ಗಡಿಭಾಗದಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡಿದ್ದರೂ ಪ್ರಯೋಜನಕಾರಿಯಾಗದಿರುವುದು ಸಮಸ್ತ ಕನ್ನಡಿಗರಿಗೆ ಗೊತ್ತಿರುವ ಸಂಗತಿ. ಇಂತಹ ಜಾಗಗಳಲ್ಲಿ  ಅಲ್ಪಸ್ವಲ್ಪ ಕನ್ನಡ ಭಾಷೆ ಮಾತನಾಡುವವರು ನಮಗೆ ಕಾಣ ಸಿಗುತ್ತಾರೆ.  ಅಲ್ಲದೆ ಅಪರೂಪದ ನಾಮಫಲಕಗಳು ಕೂಡ ಕಾಣಸಿಗುವುದುಂಟು.  ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  ತಪ್ಪು ಸಂದೇಶ ನೀಡುವ ನಾಮಫಲಕಗಳು ಕಂಡು ಬರುತ್ತಿರುವುದು ನಮ್ಮ ದುರ್ದೈವಾಗಿದೆ.

ಮುಖ್ಯವಾಗಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಬದಿಯಲ್ಲಿ ಬರೆಸಲಾಗಿರುವ ನಾಮಫಲಕಗಳನ್ನು  ಜನಸಾಮಾನ್ಯರೂ ಗಮನಿಸುತ್ತಾರೆ.   ಈ ಇಲಾಖೆಯ ಬರವಣಿಗೆಯಲ್ಲಿ   ಅಲ್ಲಲ್ಲಿ ಕನ್ನಡ ಭಾಷೆಯನ್ನು ಅಪಭ್ರಂಶಗೊಳಿಸುವ ಉದಾಹರಣೆಗಳು ನಮಗೆ ಕಾಣ ಸಿಗುತ್ತಲೇ ಇವೆ  ಇದಕ್ಕೊಂದು ಸೇರ್ಪಡೆ ಈ ರಸ್ತೆ Do not pass urine ಎಂಬ ಶಬ್ದವನ್ನು ಇಲ್ಲಿ ಮೂತ್ರ ತೇರ್ಗಡೆ ಹೊಂದಿಲ್ಲ ಎಂದು  ಬಿ ಬಿ ಎಂ ಪಿ ಕನ್ನಡಕ್ಕೆ ತರ್ಜುಮೆ ಮಾಡಿರುವುದು. ಇದು ಒಂದು ಉದಾಹರಣೆಯಷ್ಟೆ.


ಬೆಂಗಳೂರಿನಲ್ಲಿ ಮಾತ್ರ ಅಲ್ಲ ಇತ್ತ ಮಂಗಳೂರಿನಿಂದ ಕಾಸರಗೋಡಿಗೆ ಸಾಗುವ ದಾರಿಯಲ್ಲಿ ತಲಪಾಡಿ ಕಳೆದರೆ ಕನ್ನಡವನ್ನು ಅಪ್ಪಚ್ಚಿ ಮಾಡಿರುವುದು ಕಾಣಬಹುದು.  ರಾಜಧಾನಿಯಲ್ಲಿ ಕನ್ನಡ ಕಗ್ಗೊಲೆ  ಹಲವು ರೀತಿಯಲ್ಲಿ ಆಗುತ್ತಿದೆ . ಪ್ರಮುಖವಾಗಿ ಕಂಡು ಬರುವುದು ವಿವಿಧ  ಬಡಾವಣೆಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಮತ್ತು  ಬಿಎಂಟಿಸಿ ಬಸ್‌ಗಳಿಗೆ ಅಳವಡಿಸಿರುವ ನಾಮ ಫಲಕಗಳಲ್ಲಿ.  ಈ ಮುದ್ರಾರಾಕ್ಷಸನ ಹಾವಳಿಗೆ ಹಲವು ತಪ್ಪುಗಳು ಇರುವುದರಿಂದ  ಈ ನಾಮಫಲಕಗಳು ಜನರಿಗೆ ತಪ್ಪು ಮಾಹಿತಿ ನೀಡುತ್ತವೆ .
ನಾನೊಮ್ಮೆ ಬೆಂಗಳೂರಿಗೆ ಹೋಗಿ  ಎಮ್.ಜಿ ರಸ್ತೆಯಲ್ಲಿ ಬಿ.ಎಂ ಟಿ ಸಿ ಬಸ್ಸ್ ನಲ್ಲಿ ಪ್ರಯಾಣಿಸುವಾಗ  ಚಿನ್ನ ಸ್ವಾಮಿ ಕ್ರೀಡಾಂಗಣದ ಹೆಸರನ್ನು ಕಂಡೆ. chinnaswamy stadium ಎಂದು ಇಂಗ್ಲಿಷ್ ನಲ್ಲಿ ಸ್ಪಷ್ಟವಿದ್ದರೂ ಕನ್ನಡದಲ್ಲಿ ಮಾತ್ರ ಅದು ಚಿನ್ನಸ್ವಾಮಿ ಸ್ತೇಡಿಯಂ ಆಗಿತ್ತು!

ಇಂತಹ ವಿಚಾರಗಳ ಬಗ್ಗೆ ಲೇಖನ ಬರೆಯುವುದರಿಂದ ಸರಿಪಡಿಸಲು ಸಾಧ್ಯವಾಗದು ಇದಕ್ಕೊಂದು  ದೊಡ್ಡ ಮಟ್ಟದ ಆಂದೋಲನವೇ ಬೇಕೆಂದು ಅನಿಸುತ್ತದೆ. ಸರ್ಕಾರ ,ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜೊತೆ  ಪ್ರಾಧ್ಯಾಪಕ ವರ್ಗ,ಕನ್ನಡ ಅಭಿಮಾನಿಗಳು ಕೈಜೋಡಿಸಿದರೆ  ಉತ್ತಮ ಆದೀತೆ?

Sunday, July 22, 2018

ಪ್ರವೀಣ ಹೆಸರಿನ ಬಹುತೇಕ ಸ್ನೇಹಿತರು ಜಾಣರು ,ಆದ್ರೆ ಈ ಪ್ರವೀಣ ಯಾಕೋ ದಡ್ಡನಾದ!


ನಾನು ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿರುವಾಗ ಮೊದಲ ಬೆಂಚಿನಲ್ಲಿ ಪ್ರವೀಣ ಹೆಸರಿನ ಸ್ನೇಹಿತನೊಬ್ಬ ಲೆಕ್ಕದಲ್ಲಿ ಜಾಣನಾಗಿದ್ದ, ಹೈಸ್ಕೂಲಿನಲ್ಲಿ ಕೊನೆಯ ಬೆಂಚಿನ ಮತ್ತೊಬ್ಬ ಪ್ರವೀಣ ಹೆಸರಿನ ಗೆಳೆಯ ಕಂಠ ಪಾಠದಲ್ಲಿ ಎತ್ತಿದ ಕೈ, ಇನ್ನು ಆಕಾಶವಾಣಿಯ ಉದ್ಘೋಷಕರಾಗಿರುವ ಪ್ರವೀಣ ಹೆಸರಿನ ಮತ್ತೋರ್ವ ಸ್ನೇಹಿತ ಮಾತು,ಕೃತಿ ಎರಡರಲ್ಲೂ ಸೈ ಎನಿಸಿಕೊಂಡವರು . ಎಲ್ಲಾ ನೆನಪುಗಳ ಮದ್ಯೆ ಮತ್ತೊಬ್ಬ ಪ್ರವೀಣ ಎಂಬ ಹೆಸರಿನ ಹುಡುಗ ದಡ್ಡನಾಗಿ ಸುದ್ದಿಯಾಗುತ್ತಿದ್ದಾನೆ!
ಈ ದಡ್ಡ ಯಾರೆಂಬ ಕುತೂಹಲ ನಿಮ್ಮಲ್ಲಿ ಇರಬಹುದು.    ಹೌದು, “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು'  ಕೊಡುಗೆ ರಾಮಣ್ಣ ರೈ ಎಂಬ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ  ದಡ್ಡ ಪ್ರವೀಣ ಕ್ಲಿಕ್ ಆಗಿದ್ದಾನೆ. ಈ ಹಾಡು ನೋಡಿ...

ಕನ್ನಡ ಚಿತ್ರರಂಗದ ಪ್ರಸಿದ್ಧ ಯುವ ನಿರ್ದೇಶಕ ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಚಿತ್ರೀಕರಣಗೊಳ್ಳಲಿರುವ ಸಿನೆಮಾ   ಗಡಿನಾಡಿನ ಕನ್ನಡ ಸಮಸ್ಯೆಯನ್ನು ಕೇಂದ್ರೀಕರಿಸಿಕೊಂಡು ಪೂರ್ಣವಾಗಿ ಕಾಸರಗೋಡಿನಲ್ಲಿ ಚಿತ್ರೀಕರಣಗೊಂಡ  ಮೊದಲ ಸಿನಿಮಾ ಇದಾಗಿದೆ .ಕಾಸರಗೋಡಿನ ಕನ್ನಡ ಭಾಷೆ, ಕಲೆ, ಸಂಸ್ಕೃತಿಯನ್ನು ವಿಶ್ವದಲ್ಲೇ ಹಬ್ಬಿಸುವುದಲ್ಲದೆ  ಕಾಸರಗೋಡಿನ ಕನ್ನಡವನ್ನು ಉಪಯೋಗಿಸಿರುವುದು ಕಳೆದ ಬಾರಿ ರಿಲೀಸ್ ಆಗಿರುವ ಹಾಡಿನಲ್ಲೇ ಗೊತ್ತಾಗುತ್ತದೆ.

ದಡ್ಡ ದಡ್ಡ ಹಾಡನ್ನು  ತ್ರಿಲೋಕ್ ವಿಕ್ರಮ್ ಪ್ರಾಸಬದ್ದವಾಗಿ   ಬರೆದಿದ್ದಾರೆ. ಹಕ್ಕಿ ಮುಟ್ಟದ ಕಾಳು ಹೊಡೆದ ಟೆನ್ನಿಸ್ ಬಾಲು..  ಎಂದು ಮುಂದುವರೆಸಿ ಹಾಡು ಬಾ ಕೊಗೀಲೆ ವೈ ಆರ್ ಯು ಸೈಲೆಂಟ್... ಅಂತ ವಿವರಿಸುತ್ತಾರೆ. ಇವೆಲ್ಲವನ್ನೂ      ವಾಸುಕಿ ವೈಭವ್ ಸಂಗೀತ ನೀಡಿ  ಧ್ವನಿಯನ್ನೂ ಸೇರಿಸಿ ಎಲ್ಲಾ ವಯೋಮಾನದವರೂ ಕೇಳುವ ಹಾಗೆ ಮಾಡಿದ್ದಾರೆ. ನಮ್ಮ ಬಾಲ್ಯದ ದಿನಗಳು, ಹದಿಹರೆಯದ ಹಂತಗಳು, ಶಾಲಾ ಜೀವನದ ಆನಂದದಾಯಕ ಸಂಗತಿಗಳು,   ಮತ್ತೆ ನಮ್ಮನ್ನು ಹಾಡು ಪ್ರಾಥಮಿಕ ಶಾಲೆಯತ್ತ ಕರೆದೊಯ್ಯುವ ಪ್ರಯತ್ನ ಮಾಡಿದಂತಿದೆ ಈತ ದಡ್ಡ ಆಗಿರುವುದಕ್ಕೆ ನನಗೇನೂ  ಬೇಸರವಿಲ್ಲ ಆತನ ಬಗ್ಗೆ ಹೆಮ್ಮೆ ಅನಿಸುತ್ತದೆ!
ರಿಷಬ್ ಶೆಟ್ಟಿಯವರು ಪ್ರವೀಣನನ್ನು ದಡ್ಡ ಮಾಡಿದ್ದು ಒಳ್ಳೆಯದೇ ಆಯಿತು. ವಿನೂತನ ಶೈಲಿಯಲ್ಲಿ ಸಿನೆಮಾ ಮಾಡುತ್ತಿರುವ ರಿಷಬ್ ಶೆಟ್ಟಿ ಬಳಗಕ್ಕೆ ಬಿಗ್  ಸೆಲ್ಯೂಟ್.