Friday, December 30, 2016

ಹೊಸ ಬಗೆಯಲಿ ಬರಲಿ… ಸುಖ ಸಾವಿರ ತರಲಿ

ಹೊಸ ವರ್ಷ ಎಂದಾಗ ಸ್ವಭಾವಿಕವಾಗಿ ಹೊಸತು ಎನ್ನುವ ಭಾವನೆ ಹಲವರದು. ಆದರೆ ಕಾಲದ ಕೈ ಗಡಿಯಾರದಲ್ಲಿ ಬದುಕುವ ಇಂದಿನ ಜನರ ಬದುಕೆ ವಿಚಿತ್ರ. ಹೊಸ ವರುಷಕ್ಕೆ ಹಿಂದೆ ಬರುತ್ತಿದ್ದ ಗ್ರೀಟಿಂಗ್ ಕಾರ್ಡುಗಳು ಈಗ ಅಂಚೆಯಲ್ಲಿ ಬರುವುದಿಲ್ಲ .ಏನಿದ್ದರೂ ವಾಟ್ಸಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಫಾರ್ವರ್ಡ್ ಸಂದೇಶಗಳು ಬಂದು ಸೇರಿಕೊಳ್ಳುವ ಕಾಲ. ದಿನಾ ಸೂರ್ಯ ಮುಳುಗಿ ಮತ್ತೆ ಉದಯಿಸುವ ಸ್ವಭಾವಿಕ ಅಂಶದ ಒಂದು ಪರಿಕಲ್ಪನೆ ಅಥವಾ ಇನ್ನೊಂದು ಕಲ್ಪನೆಯೇ ಹೊಸ ವರ್ಷ ಅಥವಾ ಹೊಸ ದಿನ .ಅದರಲ್ಲೂ ದಿನದ ಬೀಳ್ಕೊಡುಗೆ ಮತ್ತು ಸ್ವಾಗತ ದ ನೆಪದಲ್ಲಿ ನಡೆಯುವ ವಿಭಿನ್ನ ಕಾರ್ಯಕ್ರಮಗಳು ಗಲ್ಲಿಗೊಂದರಂತೆ ಹೊಸತನದಿಂದ ಕೂಡಿರುತ್ತದೆ.ಈ ನಡುವೆ ಹೊಸ ವರ್ಷ ದ ಹೆಸರಿನಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಸಾರ್ವಜನಿಕರು ಹಾಗೂ ಯುವಕರು ಮಧ್ಯ, ಧೂಮಪಾನ ಸೇವಿಸಿ, ಪಟಾಕಿ ಸಿಡಿಸಿ, ಚೀರಾಡುತ್ತಿರುವುದು ಕಣ್ಣಿಗೆ ಕಾಣುವ ಸತ್ಯ. ಹೊಸ ದಿನಗಳ ಹೆಸರಲ್ಲಿ ಸಮಾಜದ ಸ್ವಾಸ್ಥ್ಯ ಕದಡುವ ಆತಂಕ ಎದುರಾಗಿದ್ದು, ಕಾನೂನುಬದ್ದಗೊಳಿಸಬೇಕೆಂಬುದು ಹಲವರ ಒತ್ತಾಸೆ .ಹೊಸ ವರ್ಷಾಚರಣೆ ನಮ್ಮ ದೇಶದ ಸಂಸ್ಕೃತಿಯಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಗೆ ನಮ್ಮ ದೇಶದ ಯುವಕರು ಮಾರು ಹೋಗಿರುವುದು ಇದರಿಂದ ತಿಳಿಯುತ್ತದೆ. ಡಿಸೆಂಬರ್ 31 ಕೊನೆಯ ದಿನದಂದು ಇದುವರೆಗೆ ಖರ್ಚು ಮಾಡದಷ್ಟು ಬಂಡವಾಳ ಹಾಕಿ ಅರಿವಿಲ್ಲದ ಸಂಭ್ರಮ ಮಾಡುವವರ ಸಂಖ್ಯೆ ಹೆಚ್ಚಾಗಿದೆ.ತನ್ನ ಮನೆಗೆ ಇದುವರೆಗೆ ಕೊಂಡು ಹೋಗದ ಆಹಾರ ತಿನಿಸುಗಳನ್ನು ಎಲ್ಲೋ ಕಾಣದ ಜಾಗದಲ್ಲಿ ಮಧ್ಯರಾತ್ರಿಯಲ್ಲಿ ಸೇರಿಕೊಂಡು ಹಂಚಿ ತಿನ್ನುತ್ತಾರೆ. ಆದರೆ ನಿತ್ಯ ಬದುಕುವ ಜನರಿಗೆ ಹೊಸತನದ ಹುಚ್ಚು ಇಲ್ಲ. ಕೈ ಗೆ ಸಂಬಳದ ರೂಪದಲ್ಲಿ ಹೊಸ ಗರಿ ಗರಿ ನೋಟುಗಳು ಸಿಗುತ್ತಾವೆ ಹೊರತು ಹೊಸ ಕೆಲಸ ಯಾರು ಕೊಡುವುದಿಲ್ಲ ಮತ್ತು ಯಾರು ಅಪೇಕ್ಷೆಸಿಸುವುದಿಲ್ಲ ಕೂಡ.
ಹೊಸ ವರ್ಷ ಎಂದ ಮಾತ್ರಕ್ಕೆ ಯಾರು ಹೊಸ ಚಾಪೆ,ಹೊಸ ಬೆಡ್ ಶೀಟ್ ನಲ್ಲಿ ಮಲಗುವುದಿಲ್ಲ.ಹೊಸ ಅಕ್ಕಿಯ ಪ್ಯಾಕೆಟ್ ತೆರೆದು ಅನ್ನ ಬೇಯಿಸುವುದಿಲ್ಲ! ಹಳೆಯ ಪಾತ್ರೆಯಲ್ಲೆ ಅಡುಗೆ. ಆಸ್ಪತ್ರೆಯಲ್ಲಿ ರೋಗಿಗೆ ಹೊಸ ಬೆಡ್ ಅಥವಾ ಹೊಸ ಮದ್ದುಗಳನ್ನು ನೀಡುವುದಿಲ್ಲ .ಹಳೆಯ ಖಾತೆಯಲ್ಲಿ ಹಣ ಜಮೆ!!ಹೀಗೆ ಆಳವಾಗಿ ಯೋಚಿಸಿದರೆ ಹೊಸವರ್ಷದಲ್ಲಿ ನವ ಅಥವಾ ಹೊಸತು ಪರಿಕಲ್ಪನೆಗೆ ಅರ್ಥವೇ ಇರುವುದಿಲ್ಲ .ಹೊಸ ಕ್ಯಾಲೆಂಡರ್ ಎದುರಿನ ಗೋಡೆಯಲ್ಲಿ ನೇತು ಹಾಕಿದರೂ ಇರುವ ಕಣ್ಣಿನಲ್ಲೇ ನೋಡಬೇಕು ಹೊರತು ಹೊಸ ಕಣ್ಣು ಇಟ್ಟು ನೋಡಲಾಗುತ್ತದೆಯೆ? ಗಡಿಯಾರದ ಮುಳ್ಳಿನಲ್ಲಿ ಏನೂ ವ್ಯತ್ಯಾಸ ಆಗುವುದಿಲ್ಲ ಅದೂ ಬ್ಯಾಟರಿ ಮುಗಿದರೆ ಮಾತ್ರ ನಿಲ್ಲುತ್ತದೆ! ,
ಈಗೀನ ಜಾಯಮಾನದ ಹೊಸ ಬದಲಾವಣೆಯೆಂದರೆ ವಾಟ್ಸ್ ಪ್ ನಲ್ಲಿ ಹೊಸ ರೀತಿಯಲ್ಲಿ ಫೋಸ್ ಕೊಟ್ಟು ಡಿ.ಪಿ ಹಾಕುವುದು.ಹೊಸ ಹೆಸರಿನ ಅಮಲು ಪದಾರ್ಥ ಸೇವಿಸಿವುದು. ಹೊಸ ಹುಡುಗ ಅಥವಾ ಹುಡುಗಿಗೆ ಲವ್ ಪ್ರಪೋಸ್ ಮಾಡೊದು. ಹೊಸ ಮೊಬೈಲ್ ಖರೀದಿ ಹೀಗೆ ಒಟ್ಟಿನಲ್ಲಿ ಏನಾದರೂ ಹೆಸತು ಬೇಕೆ ಬೇಕು ಎನ್ನುವ ಮನಸ್ಥಿತಿ.
 1935ರಲ್ಲಿ ರಾಷ್ಟ್ರಕವಿ ಕುವೆಂಪು ಹೇಳಿದ ’ಮನುಜ ಮತ ವಿಶ್ವಪಥ’ ನನಗೆ ನೆನಪಾಗುತ್ತಿದೆ
, ಬನ್ನಿ, ಸೋದರರೆ, ಬೇಗ ಬನ್ನಿ!
ಗುಡಿ ಚರ್ಚುಮಸಜೀದಿಗಳ ಬಿಟ್ಟು ಹೊರಬನ್ನಿ,
ಬಡತನವ ಬುಡಮುಟ್ಟ ಕೀಳಬನ್ನಿ,
ಮೌಢ್ಯತೆಯ ಮಾರಿಯನ್ನು ಹೊರದೂಡಲೈ ತನ್ನಿ,
ವಿಜ್ಙಾನ ದೀವಿಗೆಯ ಹಿಡಿಯ ಬನ್ನಿ.
, ಬನ್ನಿ, ಸೋದರರೆ, ಬೇಗ ಬನ್ನಿ!
ಕುವೆಂವುರವರು ಆ ಕಾಲಕ್ಕೆ ’ಗುಡಿ ಚರ್ಚುಮಸಜೀದಿಗಳ ಬಿಟ್ಟು ಹೊರಬನ್ನಿ ಬಡತನವ ಬುಡಮುಟ್ಟ ಕೀಳಬನ್ನಿ, ಎಂದು ಹೇಳಿದರು ನಿಜ, ಆದರೆ  ಮೌಢ್ಯತೆಯಲ್ಲೆ ಬದುಕುತ್ತಿರುವ  ಜನರಿಗೆ ಇದು ಸಾಧ್ಯವೆ? ತನ್ನ ಕವಿತೆಯಲ್ಲಿ ಮುಂದು ವರಿಸುತ್ತಾ ಮತದ ಮತದ ಹಳೆಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ ಎಂಬುದಾಗಿ ಬರೆದಿರುವುದನ್ನು ಗಮನಿಸಬಹುದು. ನಿತ್ಯ ಬದುಕಿನಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೊಸ ವರ್ಷ ಅಲ್ಲದಿದ್ದರೂ ಜಾತಿ,ಧರ್ಮ ,ರಾಜಕೀಯಕ್ಕೆ ಪೂರಕವಾದ ಹೊಸ ಸುದ್ದಿಗಳು ಬರುತ್ತಾ ಇರುತ್ತದೆ.ಮಾತ್ರವಲ್ಲ ಹೊಸತರದ ಸಮಸ್ಯೆಗಳಿಗೆ ಹೊಸ ಅಪರಿಚಿತ ಮುಖಗಳ ಮೇಲೆ ಧ್ವೇಷ ಹುಟ್ಟುವಂತೆ ಮಾಡುತ್ತದೆ.  ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು ತನ್ನ ಕವಿತೆಯೊಂದರಲ್ಲಿ ಹೊಸ ಬಗೆಯಲಿ ಬರಲಿ… ಸುಖ ಸಾವಿರ ತರಲಿ… ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ   ಎಂದು ಬರೆದಿರುವುದು ಸಕಾಲಕ್ಕೆ ಎಂಬುದು ತಿಳಿಯುತ್ತದೆ .,ನಮ್ಮ ದೇಹದ ಭಾಗಗಳನ್ನು ನಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಲು ಆಯ್ಕೆಗಳಿದ್ದರೆ  ಮೊನ್ನೆ ನೋಟಿನ ಸಮಸ್ಯೆ ಮತ್ತು ಚಿಲ್ಲರೆ ಸಮಸ್ಯೆ ಯ ಹಾಗೆ ಪ್ರತಿ ಹೊಸ ವರ್ಷಕ್ಕೆ ದೇಹದ ಬಿಡಿ ಭಾಗಗಳ ಕೊರತೆಯಾಗುತ್ತಿತ್ತು! ಹೊಸ ವರ್ಷದಿಂದ ಹೊಸ ಮನುಷ್ಯ ಎಂದು ನಾವು ಭಾವಿಸಿದರೂ ಸಮಾಜ ನಮ್ಮನ್ನು ಸ್ವೀಕರಿಸದು.ಯಾಕೆಂದರೆ ನಮ್ಮ ವ್ಯಕ್ತಿತ್ವದ ಬಗ್ಗೆ ಕೊಂಚವಾದರೂ ಹಲವರಿಗೆ ತಿಳಿದಿರುತ್ತದೆ.ಸಮಾಜಕ್ಕೆ ಹೊಸತನ್ನು ನೀಡುವ,ಹೊಸ ಬದಲಾವಣೆ ತರುವ ಪ್ರಯತ್ನ ಆಗಬೇಕು. ನಮ್ಮ ಸಂತೊಷಕ್ಕೆ ಹೊಸ ದಿನವನ್ನು ಆಚರಿಸುವುದು ತಪ್ಪಲ್ಲ. ಆದರೆ ಮತ್ತೊಬ್ಬರಿಗೆ ತೊಂದರೆ ಕೊಡುವ ಪರಿಸ್ಥಿತಿ ನಿರ್ಮಾಣವಾಗುವುದಾದರೆ ಅದನ್ನು ಕೈ ಬಿಡುವುದು ಒಳಿತು. ಕಲಿಕೆಯ ಹಂತದಲ್ಲಿರುವ ಯುವ ಮನಸ್ಸುಗಳು ಇಂದು ಹಿರಿಯರಿಗೆ ಹಾಗಲ್ಲ ಇದು ಹೀಗೆ ಎಂದು ಬುದ್ದಿವಾದ ಹೇಳುವ ಕಾಲ ಬಂದಿದೆ. ಹಾಗಿರುವಾಗ ಹೊಸತನವೆಂದರೆ ನಿತ್ಯ ಆಡುವ ಭಾಷೆಯಲ್ಲಿ ಶುದ್ಧಾಂಗವಾಗಿ ಪದ ಬಳಕೆ ಮಾಡುವುದು. ಗುಣಾತ್ಮಕ ಅಂಶಗಳನ್ನು ಬಾಚಿಕೊಳ್ಳುವುದು. ಹಳೆಯ ದಿನಗಳು ಕಳೆಯಿತು ಎಂದು ಸಂಭ್ರಮಿಸಿ ಇನ್ನೂ ಬರುವುದೆಲ್ಲವೂ ಒಳಿತನ್ನು ತರುತ್ತದೆ ಎಂಬುದು ಭ್ರಮೆ ಮಾತ್ರ. ಪ್ರಯೋಗಶೀಲ ಮತ್ತು ಬದಲಾವಣೆಗೆ ಒಪ್ಪುವ ಮತ್ತು ಬದುಕಿಗೆ ಹತ್ತಿರವೆಣಿಸುವ ವಿಷಯವಾದರೆ ಸಾಂಗವಾಗಿ ಫಲ ನೀಡಿತು. ಇಂದು ಮತ್ತು ನಾಳೆಯ ಕನಸುಗಳ ನಡುವೆ ಎರಡು ಕನಸುಗಳ ಜೊತೆ ಬದುಕಬೇಕು . ಹೊಸತನದ ಬಯಕೆಯಲಿ ಜೀವನ ಪಥ ಬದಲಾಯಿಸುವುದು ಸರಿಯಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಬದುಕನ್ನು ಅನುಭವಿಸುವುದು ಒಳ್ಳೆಯದಲ್ಲವೆ?.

Friday, December 09, 2016

ತುಳು ಚಿತ್ರರಂಗಕ್ಕೆ ಕೋಸ್ಟಲ್ ವುಡ್ ಹೆಸರು ಬಂದದ್ದು ಹೇಗೆ?

ಈಗ ನಮ್ಮ ಕುಡ್ಲದಲ್ಲಿ .ದಿನಕೊಂದರಂತೆ ಹುಟ್ಟಿಕೊಳ್ಳುವ ತುಳು ಸಿನೆಮಾಗಳ ಸುದ್ದಿ ಆಗಾಗ ಕೋಸ್ಟಲ್ ವುಡ್ ಎಂಬ ಪದದೊಂದಿಗೆ ಪ್ರಕಟಗೊಳ್ಳುತ್ತಿದೆ.ಈ ಕೋಸ್ಟಲ್ ವುಡ್ ಪದ ಬಳಕೆ ಶುರು ಮಾಡಿದ್ದು ಯಾರು ಎನ್ನುವುದರ ಬಗ್ಗೆ ಕುತೂಹಲವಿದೆಯೇ? ಹಾಲಿವುಡ್,ಸೆಂಡಲ್ ವುಡ್ ನಂತೆ ನಮ್ಮ ತುಳು ಚಿತ್ರರಂಗಕ್ಕೂ ನಾಮಕರಣ ಮಾಡಿದ್ದು ಸ್ಟೀವನ್ ರೇಗೊ ದಾರಂದಕುಕ್ಕು .ಇವರು ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಉಪ ಸಂಪಾದಕರಾಗಿ ,ವರದಿಗಾರರಾಗಿ ಎಲ್ಲರಿಗೂ ಚಿರಪರಿಚಿತರು. ಮೂಲತ: ಪುತ್ತೂರು ತಾಲೂಕಿನ ದಾರ೦ದಕುಕ್ಕು ನಿವಾಸಿ ಹಿಲ್ಡಾ ರೇಗೊ ಮತ್ತು ಇಗ್ನೇಶಿಯಸ್ ರೇಗೋ ಇವರ ಪುತ್ರ .ಕನ್ನಡ ಸಿನಿಮಾ ಚಿತ್ರರಂಗಕ್ಕೆ ಈಗಾಗಲೇ  sandalwood ಎಂಬ ಹೆಸರು ಜಗದೆಲ್ಲೆಡೆ ಹಬ್ಬಿದೆ.ಆದರೆ ಸುಮಾರು 40 ಸಿನಿಮಾ ದಾಟಿದರೂ ಕರಾವಳಿ ತೀರದ ಸಿನಿಮಕ್ಕೊಂದು ನಾಮಕರಣ ಬೇಕು ಎನ್ನುವಾಗ ಇವರಿಗೆ ಹೊಳೆದದ್ದೆ “ಕೊಸ್ಟಲ್ ವುಡ್" ಎಂಬ ಶಬ್ದ .ಈಗ coastalwood  ಪದ ದೇಶದೆಲ್ಲೆಡೆ ಹರಡಿದ್ದು ಎಲ್ಲ ಮಾಧ್ಯಮಗಳು ಈಗ ಕೊಸ್ಟಲ್ ವುಡ್ ಎಂದೇ ಇಡೀ ತುಳು ಚಿತ್ರಂಗವನ್ನು ಕರೆಯುತ್ತಿದೆ .ಕರಾವಳಿ ಸಿನಿಮಾ ಸುದ್ದಿಗಳಿಗೆ ಮಸಾಲೆ ಅರೆದು ಓದುಗನನ್ನು ಕುತೂಹಲ ಮೂಡಿಸುವಂತೆ ಮಾಡುವ ಕಲೆ ರೇಗೊರವರದು .ಇತ್ತೇಚೆಗೆ ಕುಡ್ಲ ಗಾಸಿಪ್ ನ್ನು ಪ್ರಕಟಿಸಿ ಪ್ರತಿ ವಾರ ಕಾಯುವಂತೆ ಮಾಡುತ್ತಿರುವುದು ನಿಮಗೆಲ್ಲರಿಗೂ ತಿಳಿದ ಸಂಗತಿ. ಕನ್ನಡ ಪತ್ರಿಕೆಯಲ್ಲಿ ಅದುಕೂಡ ರಾಜ್ಯವ್ಯಾಪ್ತಿಯ ಅವೃತ್ತಿಯಲ್ಲಿ ಮಂಗಳೂರಿನ ಸಿನಿಮಾ ಸುದ್ದಿಗಳ ಬಗ್ಗೆ ವಿಶೇಷವಾಗಿ ‘ಕುಡ್ಲ’ ಎನ್ನುವ ತುಳು ಶಬ್ದವನ್ನು ಪ್ರಯೋಗ ಮಾಡಿದವರಲ್ಲಿ ಇವರು ಮೊದಲಿಗರು.
ಸ್ಟೀವನ್ ರೇಗೊ ದಾರಂದಕುಕ್ಕು
ಬಾಲ್ಯದಲ್ಲಿಯೇ ಪುತ್ತೂರಿನ ಸುದ್ದಿ ಪತ್ರಿಕೆಗೆ   ಸಣ್ಣ ಕವನ,ಲೇಖನಗಳನ್ನು ಬರೆಯುವ ಮೂಲಕ ಶುರುವಾದ ಬರವಣಿಗೆ ಇಂದು ಉಪಸಂಪಾದಕ ಹುದ್ದೆಯ ವರೆಗೆ ತಲುಪಿಸಿದೆ. ರೇಗೊರವರಿಗೆ ತಾನು ಮಾಧ್ಯಮ ವರದಿಗಾರನಾಗಬೇಕೆಂದು ಎಳೆ ವಯಸ್ಸಿನಲ್ಲೆ ಕನಸು ಕಂಡವರಲ್ಲ .ಏನಾದರೊಂದು ಹೊಸ ಲೇಖನ ಬರೆಯಬೇಕು ಎಂದು ಆಲೋಚಿಸಿದಾಗ ಇವರಿಗೆ ನೆನಪಿಗೆ ಬಂದದ್ದು ಪುತ್ತೂರಿನ ಬಿಸಿ ನೀರಿನ ಬುಗ್ಗೆ. ಇದು ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಬುಗ್ಗೆಯಾಗಿದ್ದು ಅಂದು ಪ್ರಜವಾಣಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕರ್ನಾಟಕ ದರ್ಶನ ಅಂಕಣದಲ್ಲಿ ಮುಖಪುಟದಲ್ಲಿ ಲೇಖನ ಪ್ರಕಟವಾಗಿದ್ದೆ ಹೊಸ ತಿರುವನ್ನು ಪಡೆಯಲು ಕಾರಣವಾಯಿತು. ಆಗ ಸ್ಟೀವನ್ ರೇಗೊ ಎಂಬ ಹೆಸರು ಎಲ್ಲೆಡೆ ಹರಡಿತು. ಇನ್ನೊಂದು ವಿಶೇಷವೆಂದರೆ.ಗ್ರಾಮೀಣ ಭಾಗದಿಂದಲೇ ಬೆಳೆದು ಬಂದ ಸ್ಟೀವನ್ ರೇಗೊರವರು ಗ್ರಾಮೀಣ ಜನ ಜೀವನ ಅಲ್ಲಿಯ ಜೀವಂತ ಸಮಸ್ಯೆಗಳನ್ನು ಕಣ್ಣಾರೆ ಕಂಡವರು. ಹಾಗಾಗಿಯೇ ಗ್ರಾಮೀಣ ವರದಿಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತಾ ಬಂದಿದ್ದಾರೆ.ಇದರ ಫಲವಾಗಿಯೇಕಡಂದಲೆಪ್ರಶಸ್ತಿಗೆ ಇವರು ಆಯ್ಕೆಯಾದರು .ಜಗತ್ತಿನೆಲ್ಲೆಡೆ ಮಲ್ಲಿಗೆಯ ಕಂಪು ಬೀರಿರುವ ಉಡುಪಿಯ ಶಂಕರಪುರ ಮಲ್ಲಿಗೆ ಬಗ್ಗೆ ನೀವೆಲ್ಲ ತಿಳಿದಿರಬೇಕಲ್ಲವೆ? ಹೆಸರಾಂತ ಮಲ್ಲಿಗೆಯ ಬೆನ್ನು ಹತ್ತಿದಾಗ ಮಲ್ಲಿಗೆಗೆ ಬಳಸುತ್ತಿದದ್ದು ಮಾತ್ರ ವಿಷಕಾರಿ ಕೀಟನಾಶಕ! ಹೌದು ಮಲ್ಲಿಗೆಯ ವರದಿಯನ್ನು ತಯಾರಿಸಿ ಕೃಷಿಗೆ ಮತ್ತು ಕೃಷಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಇವರ ಲೇಖನ ಒಂದು ಆಂದೋಲನವನ್ನೇ ಮಾಡಿತು.

ಇದಕ್ಕಾಗಿ ಕಿನ್ನಿಗೋಳಿಯ ಯುಗ ಪುರುಷ ಮತ್ತು ವಿಜಯ ಕಲಾವಿದರ ಸಹಯೋಗದಲ್ಲಿ ಹಿರಿಯ ಪತ್ರಕರ್ತ ದಿ|| ಕೆ.ಜೆ. ಶೆಟ್ಟಿ ಕಡಂದಲೆ ಇವರ ಸ್ಮರಣಾರ್ಥಕಡಂದಲೆಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.ನಮ್ಮ ದಕ್ಷಿಣ ಕನ್ನಡದಲ್ಲಿಯೇ ಹುಟ್ಟಿ ಇಲ್ಲೇ ಸಾಯುವ ನಂದಿನಿ ನದಿಯ ಬಗ್ಗೆ ಬರೆದ ವಿಮರ್ಶಾತ್ಮಕ ಲೇಖನಕ್ಕೆ .. ಜಿಲ್ಲಾ ಪತ್ರಕರ್ತರ ಸಂಘದಿಂದ ಪಾ.ಗೊ (ಪದ್ಯಾಣ ಗೋಪಾಲಕೃಷ್ಣ) ಪ್ರಶಿಸ್ತಿಗೂ ಇವರು ಅರ್ಹರಾದರು.ಇನ್ನು ಎಲ್ಲ ವಯೋ ಮಾನವವರು ಓದಲೇ ಬೇಕೆನಿಸುತ್ತದೆ. ಇಂತಹ ಕರಾವಳಿ ಸಿನಿಮಾ ಸುದ್ದಿಗಳನ್ನು 4 ವರ್ಷಗಳಿಂದ ಬರೆಯುತ್ತಿದ್ದ ಇವರ ಲೇಖನದ ಗುಣಮಟ್ಟ ಮತ್ತು ಅತೀ ಹೆಚ್ಚು ಸಿನಿಮಾ ಲೇಖನ ಬರೆದ ಫಲವಾಗಿ 2014 ಸಿರಿ ಸಿನಿಮಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಇದೀಗಾ ಇವರ ಎಲ್ಲಾ ಲೇಖನಗಳಿಗೆ ತಮ್ಮ ಪತ್ನಿ ಸಾಥ್ ನೀಡುತ್ತಿದ್ದಾರೆ.

Wednesday, December 07, 2016

ಆಡಿನ ಒಡನಾಟ ಕುಟ್ಟ- ಕುಟ್ಟಿ ಒಂದು ನೆನಪು

"ಆಡು ಮುಟ್ಟದ ಸೊಪ್ಪಿಲ್ಲ" ಎನ್ನುವ ಮಾತು ನೀವೆಲ್ಲರೂ ಕೇಳಿರಲೇ ಬೇಕು . ನಾನಾಗ 8ನೇ  ತರಗತಿ ಓದುತ್ತಿದ್ದೆ.ನಮ್ಮ ಮನೆಯಲ್ಲಿ ಆಗಎರಡು ಆಡುಗಲಿದ್ದವು .ಗಂಡು ಆಡಿನ ಹೆಸರು "ಕುಟ್ಟ" ಹೆಣ್ಣು ಆಡಿನ ಹೆಸರು "ಕುಟ್ಟಿ". ಹೀಗೆ ಪ್ರೀತಿಯಿಂದ ಅದನ್ನುಕುಟ್ಟ- ಕುಟ್ಟಿ ಎಂದು ಕರೆಯುತ್ತಿದ್ದೆವು . ಆಡುಗಳನ್ನು ನಾವೇನು ಕಟ್ಟಿ ಹಾಕುತಿರಲಿಲ್ಲ .ಅದರಷ್ಟಕೆ  ತಿಂದು ಬಂದು ಹೋಗುತ್ತಿದ್ದವು. ನಮ್ಮ ಪ್ರೀತಿಯ ಕುಟ್ಟ  ನಮ್ಮ ಮನೆಯ ತುದಿಗೆ(ಮನೆಯ ಕುಬಾಲ್) ಹೋಗಿ ಜಾರಿಕೊಂಡು ಬರುತಿತ್ತು . ಪಕ್ಕದಲ್ಲಿ ಹಂಚಿನ ಮಾಡು ಏರಲು ಎತ್ತರದ ಜಾಗವು ಇತ್ತು . ಕೊನೆಗೆ ಅದರ ಉಪದ್ರ ತಡೆಯಲಾರದೆ ತಂದೆ ಅದನ್ನು ಮಾರಿಬಿಟ್ಟರು .ಆಗೇನು ನಮಗೆ ಬೇಸರ ಆಗಲಿಲ್ಲ . ಮತ್ತೊಂದು ಕುಟ್ಟಿ  ಅದಕ್ಕೆ ದಿನಾ ಬಟಾಣಿ ಕಡ್ಲೆ ಬೇಕೆ ಬೇಕು . ಬಟಾಣಿ ರುಚಿ ಹಿಡಿಸಿದ್ದೆ ನಾನು !  ಶಾಲೆಯಿಂದ ನಡೆದು ಕೊಂಡು ಬರುವಾಗ  ಕಡ್ಲೆ ತಿನ್ನುತ್ತಾ ಬರುತ್ತಿದ್ದೆವು . ಉಳಿದ ಕಡ್ಲೆಯನ್ನು  ಪ್ರೀತಿಯ ಕುಟ್ಟಿಗೆ  ಕೊಡುತ್ತಿದ್ದೆ .

ಒಂದು ದಿನ ಮನೆಯಲ್ಲಿ ಯಾರು ಇರಲಿಲ್ಲ  ಅದು  ಶನಿವಾರ ಬೇರೆ .ತಾಯಿ ಆಗ ಬೇರೆ ಕಡೆ ಕೆಲಸ ಮಾಡುತ್ತಿದ್ದರು . ನಾವು ಶಾಲೆ ಬಿಟ್ಟು ಮನೆಗೆ ಬಂದು ಊಟದ ಗಡಿಬಿಡಿಯಲ್ಲಿ ಇದ್ದೆವು . ಕುಟ್ಟಿಯನ್ನು ಕರೆದರೆ ಸುದ್ದಿಯೇ ಇಲ್ಲ . ಸಲ್ಪ ಹೊತ್ತು ಆದಾಗ ಜೋರಾಗಿ  ಬೇ... ಬೇ... ಬೇ... ಬೇ...  ಎಂಬ ಕೂಗು ಕೇಳಿತು . ನಾವೆಲ್ಲಾ ಒಮ್ಮೆ ಅತ್ತಿತ್ತ ಓಡಿದೆವು . ಪೋದೆಯೊಂದರಿಂದ ರಕ್ತ ಸುರಿಸುಕೊಂಡು ಮನೆಯ ಅಂಗಳಕ್ಕೆ ಕುಟ್ಟಿ ಬಂತು. ಸಲ್ಪ ಹೊತ್ತಲ್ಲೇ ಎರಡು ನಾಯಿಗಳು ಕೂಡ ಬಂದವು . ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಕೊತ್ತಳಿಗೆ ಯಲ್ಲಿ ನಾಯಿಗೆ ಬಿಸಾಡಿದೆವು . ಅದು ನಮ್ಮ ಪಕ್ಕದ ಮನೆಯವರ ನಾಯಿ ನಾಯಿಯನ್ನು ಯಾವತ್ತು ಬಿಡಲ್ಲ  . ದಿನ ಮಾತ್ರ ಅದು ತಪ್ಪಿಸಿಕೊಂಡು ಬಂದಿತ್ತು . ನಮ್ಮ ಕುಟ್ಟಿಗೆ  ಕುತ್ತಿಗೆಗೆ ಗಾಯವಾಗಿತ್ತು. ನಮ್ಮ ಮನೆಯ ಜಗಲಿಯಲ್ಲಿ ಬಂದು ಅಡ್ಡ ಮಲಗಿದನ್ನು ನೋಡಿ ನಾವೆಲ್ಲಾ ಜೋರಾಗಿ ಬೊಬ್ಬೆ ಹೊಡೆದೆವು . ಹೇಗೊ ತಾಯಿ ಬಂದು ಮದ್ದು ನೀಡಿದರು . ಮತ್ತಿ ಕುಟ್ಟಿಯನ್ನು  ಕಟ್ಟಿಹಾಕಲು ಶುರು ಮಾಡಿದೆವು . ಆಡಿನ ಮೇಲೆ ನನಗೆ ತುಂಬಾ ಪ್ರೀತಿ ಇತ್ತು .ನಾನು ನನ್ನ ಅಕ್ಕ, ತಮ್ಮ ದಿನಾ ನಾಚಿಕೆ ಹುಲ್ಲು ಇರುವ ಕಡೆ ಹೋಗಿ ಅದನ್ನು ಮೇಯಿಸುತ್ತಿದ್ದೆವು .

ಒಮ್ಮೆ ಪ್ರೀತಿಯ ಕುಟ್ಟಿಯನ್ನು  ಕೊಡುವಂತೆ  ಕೇಳಿಕೊಂಡು ಓರ್ವರು ಬಂದರು . ಆಗ ನಮ್ಮ ತಂದೆ ಅದಕ್ಕೆ ಒಪ್ಪಿಕೊಂಡರು. ನಾವು ಆಗಲೇ  ಜೋರಾಗಿ ಕೂಗಲು ಶುರು ಮಾಡಿದೆವು .ಆಗ ನಮಗೆ ಮೂರು ಮಂದಿಗೂ  ತಂದೆ  ಐಸ್ ಕ್ಯಾಂಡಿ ಕೊಡಿಸಿದ್ದರು. ಮರುದಿನ ರಿಕ್ಷಾ ಬಂತು ಆಗ ಇದ್ದಿದ್ದು ಲ್ಯಾಂಬಿ ರಿಕ್ಷಾ .ಅದರ ಡಿಕ್ಕಿ ತೆರೆದು ಅದರಲ್ಲಿ ಮಲಗಿಸಿದರು .ನಾವೆಲ್ಲ ಜೋರು ಜೋರು ಕೂಗಿದ೦ತೆ  ಆದು ಕೂಡ  ಬೊಬ್ಬೆ ಹಾಕುತಿತ್ತು . ನೋಡುತಿದ್ದಂತೆಯೇ  ರಿಕ್ಷಾ ಸೀದಾ ಹೋಯಿತು. ಆ ಕ್ಷಣದ ಬೇಸರ ಈಗಲೂ ಒಮ್ಮೊಮ್ಮೆ ಕಾಡುವುದುಂಟು. ನನಗೆ ಪ್ರಾಣಿಗಳ ಬಗ್ಗೆ ಪ್ರೀತಿಯಿದೆ.ಅನುಕಂಪವಿದೆ .ಆಡುಗಳನ್ನು ಮಾರಿದ ಬಳಿಕ ನಮ್ಮ ಮನೆಯಲ್ಲಿ  ನಾಯಿ ಮತ್ತು ಬೆಕ್ಕು ಹೊರತು ಪಡಿಸಿ ಬೇರೆ ಸಾಕು ಪ್ರಾಣಿಯನ್ನು ಸಾಕುವುದಿಲ್ಲ . ಆಡಿನ ಒಡನಾಟ ಈಗ ಬರೀ ನೆನಪಾಗಿ ಮಾತ್ರ ಇದೆ .