Friday, January 27, 2017

ಬೀಜ ಕುಟ್ಟುವ ಸ್ಪರ್ಧೆ ಮತ್ತು ಗೇರು ಬೀಜ ಮರದಲ್ಲಿ ಮರಕೋತಿ ಆಟ!

ಗೇರು ಹಣ್ಣು ತಿನ್ನುವುದಕ್ಕೂ  ಭಾಗ್ಯ ಬೇಕು .ತಿಂದವನೆ ಅದರ ರುಚಿಯನ್ನು ಬಲ್ಲ . ನಮ್ಮ ಮನೆಯ ಮೇಲಿನ ಗುಡ್ಡದಲ್ಲಿ ಗೇರು ಬೀಜದ ಮರ ಇತ್ತು . ಅಲ್ಲಿ ನಮ್ಮ ಸ್ನೇಹಿತರೆಲ್ಲ ಸೇರಿ ಮರಕೋತಿ ಆಟ  ಆಡುತ್ತಿದ್ದೆವು. ಅದು ಕೂಡ ಗೇರು ಹಣ್ಣು ಆಗುವ ಟೈಮ್ ನಲ್ಲಿ!  ಮರಕೋತಿಯ ಆಟ ನನಗಂತು ತುಸು ಕಷ್ಟವೇ ಆಗಿತ್ತು. ನಮ್ಮ ಆಟಗಳು  ಇಷ್ಟಕ್ಕೆ ಮಾತ್ರ ಸಿಮೀತವಾಗಿರಲಿಲ್ಲ ,ಬದಲಾಗಿ ಬೀಜ ಕುಟ್ಟುವ ಮೂಲಕ ನಮ್ಮ ಪೋಕೆಟ್  ಮನಿ  ಭರ್ತಿ ಮಾಡುತ್ತಿದ್ದೆವು. ಶಾಲಾ ದಿನಗಳಲ್ಲಿ  ನಮ್ಮ ಸಣ್ಣ ಪುಟ್ಟ ಖರ್ಚಿಗೆ  ಗೇರು ಬೀಜದ ಹಣ  ಸಾಕಾಗುತ್ತಿತ್ತು.ನಮ್ಮ ಮನೆಯಲ್ಲಿ ಅಡಿಕೆ ಹಾಳೆಯಿಂದ ಮಾಡಿದ ಮೂರು ಬ್ಯಾಗ್ ಗಳು ಇದ್ದವು ಅದರಲ್ಲಿ ಗೇರುಬೀಜಗಳನ್ನು ಸಂಗ್ರಹಿಸುತ್ತಿದ್ದೆವು.ಅಂದಹಾಗೆ ಅಡಿಕೆ ಹಾಳೆಯಿಂದ ತಯಾರಿಸಿದ ಬ್ಯಾಗಿಗೆ ಹೆಸರು ಮೂಡೆ!! ಇನ್ನು ತಿನ್ನುವ ಮೂಡೆ ನೆನಪಿಸಿಕೊಂಡು ಈ ಲೇಖನ ಓದುತ್ತಿದ್ದಿರಿ ಅಲ್ವಾ? ವ್ವಾವ್…! ನಮ್ಮ ಗುಡ್ಡದಲ್ಲಿ ಕೆಂಪು ,ಹಳದಿ ಬಣ್ಣದ ಗೇರು ಹಣ್ಣಿನ ಮರಗಳಿದ್ದವು  ರಾತ್ರಿ  ಇಡೀ ಬಾವಲಿಗಳ ಕಿರುಚಾಟ . ಕೆಲವೊಮ್ಮೆ ಬಾವಲಿಗಳನ್ನು ನೋಡುವುದಕ್ಕೆ೦ದೇ  ಲೈಟ್ ಹಿಡಿದುಕೊಂಡು ಗುಡ್ಡಕ್ಕೆ ಹೋಗುತ್ತಿದ್ದೆ .ಆಗ ನನ್ನ ಅಮ್ಮ ಗೂಬೆ ಇದೆ ಅದು ಕಣ್ಣಿಗೆ ತನ್ನ ಕೊಕ್ಕಿನಲ್ಲಿ ಕುಕ್ಕುತ್ತೆ ಎನ್ನುತ್ತಿದ್ದರು. ನಾನು ಅಕ್ಕ ಗುಡ್ಡದಲ್ಲಿ ನಿಂತುಕೊಂದು ಗೂಬೆಯ ಹಾಗೆ ಹುಂ…ಹೂಂ….ಅಂತ ಕೂಗುತ್ತಿದ್ದದ್ದು  ಈಗ ಬರೀ ನೆನಪು ಮಾತ್ರ

ಬಾವಲಿಗೆ ಹಗಲು ಕಣ್ಣು ಕಾಣುವುದಿಲ್ಲವಂತೆ!
ಬಾವಲಿಗೆ ಹಗಲು ಕಣ್ಣು ಕಾಣುವುದಿಲ್ಲ ರಾತ್ರಿ ಮಾತ್ರ ಕಣ್ಣು ಕಾಣುತ್ತೆ ಎಂದು ಅಜ್ಜಿ ಕತೆ ಹೇಳುತ್ತಿದ್ದರು.ನಮ್ಮ  ಮನೆಯ  ಕೆರೆಯ ಸುತ್ತ ಯಾರು ಹೋಗದಂತೆ  ನನ್ನ ತಂದೆ ಮುಳ್ಳಿನ ಗುಲಾಬಿ ಗಿಡ ನಟ್ಟಿದ್ದರು. ಒಮ್ಮೆ ಮನೆಯ ಕೆರೆಯ ಸಮೀಪ ಹಗಲು ಹೊತ್ತಿನಲ್ಲಿ ಬಾವಲಿ ಬಂದು ಮುಳ್ಳಿನಲ್ಲಿ ಸಿಲುಕಿಕೊಂಡಿತ್ತು. ಅದರ ಬೊಬ್ಬೆಗೆ ನಾವೆಲ್ಲ ಅಡುಗೆ ಕೋಣೆಯಲ್ಲಿ ಅವಿತುಕೊಂಡಿದ್ದೆವು. ಬಳಿಕ ಪಕ್ಕದ ಮನೆಯ ದೊಡ್ಡಮ್ಮ ಅದನ್ನು ಬಿಡಿಸಿದರು.ಅದರ ರೆಕ್ಕೆ ಯೂ ಸ್ವಲ್ಪ ಹರಿದಿತ್ತು. ಮೊದಲ ಬಾರಿ ನಾನು ಹತ್ತಿರದಿಂದ ಬಾವಲಿ  ನೋಡಿದ್ದು ಅದೇ ಮೊದಲು ನಾನು .ತಮ್ಮ, ಅಕ್ಕ ಶಾಲೆ ಬಿಟ್ಟು ಬಂದ ಕೂಡಲೇ ಕಾಯಿ ಬೀಜವನ್ನು ತುಂಡರಿಸಿ  ತಿನ್ನುತಿದ್ದೆವು ,ಏಷ್ಟೋ  ಸಲ ಬಾಯಿ ಸುಟ್ಟದ್ದು ಉಂಟು !  ಕೆಲವು ಸಲ ಕಾಡುಹಂದಿ ಬಂದು ಗೇರು ಬೀಜವನ್ನು ಜಗಿದು ಹಾಕುತಿತ್ತು .ಅದಕ್ಕೆ ನನ್ನ ತಂದೆ ಉರುಳು ಇಡುತ್ತಿದ್ದರು. ಅದು ನಮಗಿಂತಲೂ ಬುದ್ಡಿವಂತಿಕೆ  ತೋರಿಸಿ ,ಬೇರೆ ದಾರಿಯಲ್ಲಿ ಬಂದು ಅದಕ್ಕಿಂತಲೂ ಹೆಚ್ಚು ಗೇರು ಬೀಜ ತಿಂದು ಹೋಗುತಿತ್ತು !

ಸಣ್ಣ ಗಾತ್ರದ  ಕೆಂಪು ಬಣ್ಣದ ಗೇರು ಬೀಜದ ಹಣ್ಣುಗಳನ್ನು  ಹೆಚ್ಚು ನಾವೆಲ್ಲ ತಿನ್ನುತಿದ್ದೆವು . ನಮ್ಮ ಬ್ಯಾಗ್ ನಲ್ಲಿ ಪುಸ್ತಕದ ಜೊತೆಗೆ ಅರ್ಧ ಕೆ. ಜಿ ಯಷ್ಟು  ಬೀಜವು ಇರುತಿತ್ತುಹಳ್ಳಿ ಯಲ್ಲಿ ಜಾತ್ರೆ,ನೇಮೊತ್ಸವ ಹೆಚ್ಚಾಗಿ  ಇದ್ದೆ ಇರುತ್ತದೆ , ಜಾತ್ರೆಗಳಲ್ಲಿ ಐಸ್ ಕ್ಯಾಂಡಿ ,ಐಸ್ ಕ್ರೀಮ್ ,ಕಡ್ಲೆ  ಎಲ್ಲವನ್ನೂ ಗೇರು ಬೀಜ ಮಾರಿಯೇ ಹಣ ಸಂಪಾದಿಸಿದರಲ್ಲಿಯೇ ತಿನ್ನುತ್ತಿದ್ದೆವು .ಇನ್ನೂ  ಮಳೆಗಾಲದ ಸಮಯದಲ್ಲಿ ಬೆಂಕಿಯಲ್ಲಿ ಸುಟ್ಟು ತಿನ್ನುವ ಮಜವೇ ಬೇರೆ .ಒಮ್ಮೊಮ್ಮೆ ಬೆಂಕಿಗೆ ಹಾಕಿದ ಬೀಜ ಡಮ್…ಎಂದು ಮೈ ಮೇಲೆ ಬರುವೂದು ಇದೆ. ಮತ್ತೆ ಕಾಲಿಗೆ ಕಬ್ಬಿಣ ಅಥವಾ ಕಬ್ಬಿಣದ ಯಾವುದೇ ವಸ್ತು ತಾಗಿದರೂ ನನ್ನ ತಾಯಿ  ಗೇರು ಬೀಜದ ಸಿಪ್ಪೆಯನ್ನು ಬೆಂಕಿಗೆ ಇರಿಸಿ ಅದರಿಂದ ಬರುವ ಎಣ್ಣೆಯನ್ನು ಬಿಸಿ ಬಿಸಿಯಾಗಿ ಕಾಲಿಗೋ ,ಕೈಗೊ  ಮುಟ್ಟಿಸುತ್ತಿದ್ದರು .ಅದರಲ್ಲೂ  ಮದ್ದಿನ ಗುಣ ಇರುವುದನ್ನು ಕಾಣಬಹುದು .ಶಾಲಾ ದಿನಗಳಲ್ಲಿ ನಮಗೆ ಸಮರ್ಪಕವಾಗಿ ಗೇರು ಬೀಜ ಸಿಗದೇ ಹೋದ ಸಂದರ್ಭದಲ್ಲಿ ಪಕ್ಕದ ಮನೆಯವರ ಬೇಲಿ ಹಾರಿ ಹೋಗಿದ್ದು  ಈಗ ನೆನಪಾಗಿ ಉಳಿದಿದೆ.ಇಲ್ಲಿ ನನ್ನ ಅನುಭವನ್ನು ಮಾತ್ರ ಹಂಚಿಕೊಂಡಿದ್ದೆನೆ .ನೀವೂ ಕೂಡ ಓದಿ ನಿಮ್ಮ ಅನುಭವಗಳನ್ನು ಹಂಚಿ ಕೊಳ್ಳಿ .

Thursday, January 26, 2017

ಆಟೋ ರಾಜನಿಗೆ ಸಿನೆಮಾ ವೇ ಮುಖ್ಯವಾಯಿತು!

ಅರೆ ಇದ್ಯಾವ ಸಿನೆಮಾ ದ ಬಗ್ಗೆ ವಿಮರ್ಶೆ ಅಂತ ತಲೆ ಕೆಡಿಸುಕೊಳ್ಳುವುದು ಬೇಡ."ಅವಸರವೇ ಅಪಘಾತಕ್ಕೆ ಕಾರಣ" ಇದು ಎಲ್ಲಾ ಕಡೆ ಕೇಳಿ ಬರುವ ಮಾತು. ಅವಸರದಿಂದ ಅವಾಂತರವೂ ಆದ ಸಂದರ್ಭ! ನಾನು ಮಂಗಳೂರಿನ ಸುತ್ತ ಮುತ್ತ ಆಟೋ ಪ್ರಯಾಣ ಮಾಡಿದ ಅನುಭವ ಮತ್ತು ಗಮನಿಸಿದ ಮೂರು ಸತ್ಯ ಸಂಗತಿಗಳನ್ನು ಹಂಚಿಕೊಳ್ಳುವೆ
ಸತ್ಯ ಸಂಗತಿ-1 
ಇಂದು ಗಣರಾಜೋತ್ಸವದ ಕಾರ್ಯಕ್ರಮ ಮುಗಿಸಿ ಹೆಸರಾಂತ ಶಾಂಪಿಂಗ್ ಮಾಲ್ ಗೆ ಸ್ನೇಹಿತನ ಜೊತೆ ತೆರಲುತ್ತಿದ್ದೆ. ಆ ಶಾಂಪಿಂಗ್ ಮಾಲ್ ನ ಒಳಭಾಗದ ರಸ್ತೆಯಲ್ಲಿ ಬಹಳ ವೇಗದಿಂದ ರಿಕ್ಷಾವೊಂದು ಬಂತು. ಅದು ಕೂಡ ಹಾರ್ನ್ ಹಾಕದೆ. ನಮಗೆ ಒರೆಸಿಕೊಂಡೆ ಮುಂದೆ ಸಾಗಿತು. ಅರೇ ಅದೇನೂ ತುರ್ತು ಸಂದರ್ಭ ಎಂದುಕೊಂಡೆ. ಆದರೂ ನಿಂತ ರಿಕ್ಷಾದ ಬಳಿ ಬೇಗನೇ ಹೋಗಿ ವಿಚಾರಿಸಿದೆವು. ಮಾತಿನ ಚಕಮಕಿಯೂ ಆಯಿತು .ರಿಕ್ಷಾ ಚಾಲಕನ ಉತ್ತರವಂತೂ ಎಲ್ಲರೂ ಅನುಕಣೀಸಬೇಕಾದದ್ದೆ! ಅದು ಏನೆಂದು ಕೇಳ್ತಿರಾ?
ಆತನ ರಿಕ್ಷಾದಲ್ಲಿ ಹುಡುಗಿಯೊಬ್ಬಳನ್ನು ಕೂರಿಸಿಕೊಂಡು ಬಂದಿದ್ದ.ಆಕೆ ಮೊದಲೇ ಆನ್ ಲೈನ್ ನಲ್ಲಿ ಸಿನೆಮಾ ಬುಕ್ ಮಾಡಿದ್ದು., ನಿಗದಿತ ಸಮಯಕ್ಕೆ ತಲುಪಲಿಲ್ಲ .ಸಿನೆಮಾ ತಡವಾದ ಕಾರಣಕ್ಕೆ ಈ ವೇಗದ ಚಾಲನೆ. ಅಬ್ಬಾ... ಎಂಥ ವಿಚಿತ್ರ ಪಾದಚಾರಿಗಳ ಪ್ರಾಣಕ್ಕೆ ಕುತ್ತು ಬಂದರೂ ಪರವಾಗಿಲ್ಲ, ಬುಕ್ ಮಾಡಿದ ಸಿನೆಮಾ ಮಿಸ್ ಆಗಬಾರದು. ಬಹಳ ನಾಜುಕಾಗಿ ಸಮರ್ಥಿ
ಸಿಕೊಳ್ಳುವುದನ್ನು ನೋಡಿದರೆ ಮಂಗಳೂರಿನ ದಿನಚರಿ ಈ ಆಟೋ ಚಾಲನಿಂದಲೇ ಶುರುವಾಗುತ್ತದೆ ಎಂದುಕೊಳ್ಳಬೇಕು.
ಸತ್ಯ ಸಂಗತಿ -2
ಸ್ಟೇಟ್ ಬ್ಯಾಂಕಿನ ಖಾಸಗಿ ಬಸ್ಸು ಬರುವ ಎದುರಿನ ರೋಡಿನ ಸಮೀಪ ಇರುವ ರಿಕ್ಷಾ ಸ್ಟಾಂಡ್ ನಲ್ಲಿ ಕೆಲವರು ಬಾಡಿಗೆಗೆ #ಬಲೆ #ಬಲೆ ...ಓಡೆಗ್ ಪೋವೊಡು ?ಎಲ್ಲಿಗೆ ... ?ಎಂದು ಅತ್ತ ಹೋದವರನ್ನು,ಇತ್ತ ಬಂದವರೆನ್ನೆಲ್ಲ ಕರೆಯುತ್ತಿರುತ್ತಾರೆ. ವಿಶೇಷವೆಂದರೆ ಇವರ ರಿಕ್ಷಾದಲ್ಲಿ ಮೀಟರ್ ಓಡುವುದಿಲ್ಲ.ಸ್ಟೇಟ್ ಬ್ಯಾಂಕ್ ನಿಂದ ಹಂಪನಕಟ್ಟೆಗೆ 50ರೂಪಾಯಿ! ಸ್ಟೇಟ್ ಬ್ಯಾಂಕಿನಿಂದ ಜ್ಯೋತಿ ಸರ್ಕಲ್ ಗೆ 100 ರೂಪಾಯಿ!! ಇದು ಮೊನ್ನೆ ನನಗೆ ಆದ ಅನುಭವ. ಕೊನೆಗೆ ಜಗಳ ಮಾಡಿ ಟ್ರಾಫಿಕ್ ಪೊಲೀಸರಿಗೆ ಆ ಪುಣ್ಯಾತ್ಮನ ನ್ನು ಒಪ್ಪಿಸಬೇಕಾಯಿತು! ನನ್ನಂತೆಯೇ ಅನೇಕರಿಗೆ ಮೋಸ ಮಾಡುತ್ತಿರುತ್ತಾರೆ.ಮೊನ್ನೆ ಆಟೋ ಚಾಲಕನೊಬ್ಬ ಕನ್ನಡದಲ್ಲಿ ಮಾತಿಗೆ ಆರಂಭಿಸಿದ 
ನಾನು ಕನ್ನಡದಲ್ಲಿಯೇ ಮಾತು ಮುಂದುವರೆಸಿದೆ
ಕೊನೆಗೆ ನಿಗದಿತ ಜಾಗ ತಲುಪುವಾಗ ಹೆಚ್ಚುವರಿ ಹಣ ಕೇಳಿದಾಗ ದಾದಯೇ ಊರುದಕ್ಲೆನ್ ಮಂಗೆ ಮಲ್ಪುವರಾ ಎಂದು ಹೇಳಿದ್ದೆ ತಡ sorry ಎಂದು ಹೇಳುತ್ತಾ ನಿಗದಿತ ದರ ತೆಗೆದುಕೊಂಡು ಮುಂದುವರಿದ. ದಿನವೂ ಈ ರೀತಿಯ ಸುಲಿಗೆ ಆಗುತ್ತಲೇ ಇರುತ್ತದೆ. 
ಸತ್ಯ ಸಂಗತಿ-3
ಸಾಮಾನ್ಯವಾಗಿ ಆಟೋ ಚಾಲಕರು ಸಮವಸ್ತ್ರ ಧರಿಸುವುದುಂಡು.ಆದರೆ ಬಹುತೇಕ ಚಾಲಕರು ಸಾಮಾನ್ಯ ಬಟ್ಟೆಯಲ್ಲಿ ಚಾಲನೆ ಮಾಡುತ್ತಾರೆ. ಇದನ್ನು ಗಮನಿಸುವ ಪೊಲೀಸ್ ಸಿಬ್ಬಂದಿಗಳು ಮೌನದಿಂದ ಇರುತ್ತಾರೆ. ಇದರ ನಡುವೆ ಕುಡಿದು ರಿಕ್ಷಾ ಚಲಾಯಿಸಿ ಏಕಮುಖ ಸಂಚಾರವಿರುವ ರಸ್ತೆಯಲ್ಲಿ ಬಂದು ಟ್ರಾಫಿಕ್ ಪೊಲೀಸರೊಂದಿಗೆ ಜಗಳಕ್ಕೆ ಇಳಿಯುವವರು ಕೂಡ ಇದ್ದಾರೆ.ಮೊನ್ನೆ ಶರವು ಮಹಾ ಗಣಪತಿ ರಸ್ತೆಯಲ್ಲಿ ನಾನು ಕಂಡ ಘಟನೆಯಿದು
ಬರಹ ಕೊನೆಗೊಳಿವ ಮುನ್ನ, ಹಂಚಿಕೊಳ್ಳಬೇಕಾದ ಸಂಗತಿ ಅನೇಕ ಇದೆ.ಒಂದು ಮಾತು ಅಟೋ ರಿಕ್ಷಾದಲ್ಲಿ ಪ್ರಾಮಾಣಿಕ ವಾಗಿ ದುಡಿಯುವರು ತುಂಬಾ ಮಂದಿ ಇದ್ದಾರೆ. ಕಾನೂನು ಪಾಲಿಸದ ಮತ್ತು ಹೆಚ್ಚುವರಿ ಹಣ ವಸೂಲಿ ಮಾಡುವ ವರ್ಗದವರಿಂದ ನಿಯತ್ತಿನ ದುಡಿಮೆಗೆ ಬೆಲೆಯೆ ಇಲ್ಲದಂತಾಗಿದೆ.

Wednesday, January 25, 2017

ಹಾಡು ಹುಟ್ಟುವ ಸಮಯ

ಕವಿಯ ಸೃಜನೆ ನಿಂತಲ್ಲಿಯೇ ನಿಲ್ಲುವುದಿಲ್ಲ ಇದು ಇತ್ಯಾತ್ಮಕ ಅಂಶ ಎಂಬುದನ್ನು ಹಾಡು ಹುಟ್ಟುವ ಸಮಯ ಕಾರ್ಯಕ್ರಮ ಮಗದೊಮ್ಮೆ ಸಾಬೀತುಪಡಿಸಿದೆ. ನಿನ್ನೆ ಮಂಗಳೂರಿನ ಪುರಭವನದಲ್ಲಿ ಸಹೊದ್ಯೋಗಿ ಮಿತ್ರ ಅಭಿಷೇಕ್ (Abhishek Shetty)ಅವರ ನಾಯಕತ್ವದಲ್ಲಿ Team Black & White ತಂಡದಿಂದ ಹಮ್ಮಿಕೊಂಡ ಕಾರ್ಯಕ್ರಮವಿದು. ಭಾವಗೀತೆಗಳ ಸಾಗರದಲ್ಲಿ ಮಿಂದೆದ್ದ ಜನರು ಖ್ಯಾತ ಕವಿಗಳಾದ Dr HS Venkatesh Murthy ಮತ್ತು BR Lakshman Rao ಅವರು ಬರೆದ ಭಾವಗೀತೆಗಳಲ್ಲಿ ಬಂಧಿಯಾದರು. ಬುದ್ದಿ-ಭಾವಗಳ ಸರಿಸಮಾನವಾದ ಹೊಂದಾಣಿಕೆಯ ಪ್ರೇಕ್ಷಕರು, ಅಬ್ಬರವಿಲ್ಲದ ಸಂಗೀತ,ಆಡಂಬರವಿಲ್ಲದ ವೇದಿಕೆ ಕಾರ್ಯಕ್ರಮ್ಮಕ್ಕೆ ಹೊಸ ಆಯಾಮ ನೀಡಿತ್ತು. 

ಗಾಯಕರಾದ Ravi muroor, Dr Nitin Acharya, Shruti, Rashmi, Mahesh ರವರ ಇಂಪು ದನಿಗೆ ಮನಸುಗಳು ಅರಳಿ ಭಾವಸಂಗಮವಾಗಿತ್ತು .ನಿರೂಪಣೆಯಲ್ಲಿ ಭಾವ ಗೀತೆಗಳಲ್ಲಿನ ಶಬ್ಡ ದ ವಿಶಾಲ ಅರ್ಥವನ್ನು ವಿವರಿಸುತ್ತಾ Manohar Prasad ರವರು ಕವಿ ಮೂಖ ಬ್ರಹ್ಮನಲ್ಲ ಶಬ್ದ ಬ್ರಹ್ಮ ಎಂಬುದನ್ನು ಗೊತ್ತುಪಡಿಸಿದ್ದು ಹೊಸ ಬಗೆಯೆ ಸರಿ.ಇದು ಕರಾವಳಿ ಭಾಗಕ್ಕೆ ವಿನೂತನ ಕಾರ್ಯಕ್ರಮ.ಮೊದಲ ಪ್ರಯತ್ನದಲ್ಲೆ ಯಶಸ್ಸುಕಂಡದ್ದು ಹೆಮ್ಮೆಯ ವಿಷಯ, 

ಕಿದರೆ ಬಯ್ಯಾ..ಜಲ್ದಿ ಜಲ್ದಿ...!

ಬಸ್ಸಿನಲ್ಲಿ ಕಂಡಕ್ಟರ್ ಗಳ ಜವಾಬ್ದಾರಿ ಮುಖ್ಯವಾದುದು.ಸಮಯ ಪಾಲನೆಯ ಜೊತೆಗೆ ವ್ಯವಸ್ಥಿತ ರೀತಿಯಲ್ಲಿ ಪ್ರಯಾಣಿಕರನ್ನು ಹತ್ತಿಸಿ ಕೊಳ್ಳುವುದು ಮತ್ತು ಇಳಿಸುವುಸು.ಆದರೆ ಮಂಗಳೂರು ನಗರದಲ್ಲಿ ಓಡಾಡುವ ಸಿಟಿ ಬಸ್ಸುಗಳಲ್ಲಿ ಕೆಲವು ಕಂಡೆಕ್ಟರ್ ಗಳ ವರ್ತನೆ ಒಮ್ಮೊಮ್ಮೆ ವಿಚಿತ್ರವಾಗಿರುತ್ತದೆ.ಪ್ರಯಾಣಿಕರ ಎದುರಿನಲ್ಲಿಯೇ ಗುಟ್ಕಾ ತಿನ್ನೋದು.ತಂಬಾಕು ಉತ್ಪನ್ನವನ್ನು ಬಸ್ಸಿನ ಡೋರಿನಲ್ಲಿ ನಿಂತು ಕೈಯಲ್ಲಿ ಉಜ್ಜಿ ತುಟಿಯೊಳಗೆ ಇಟ್ಟುಕೊಳ್ಳುವುದು.ಇದೆಲ್ಲ ಅಸಹ್ಯವೆನಿಸುತ್ತದೆ.ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ಮಧ್ಯಪಾನ ಮಾಡಬಾರದೆಂಬ ಕನಿಷ್ಠ ಅರಿವು ಇಲ್ಲದಂತೆ ವರ್ತಿಸುತ್ತಾರೆ.ಇದರ ಜೊತೆಗೆ ಪ್ರಯಾಣಿಕರೊಂದಿಗೆ ಗೌರವದ ಶಬ್ದಗಳನ್ನು ಬಳಸುವ ಬದಲು ಏಕವಚನದಲ್ಲಿಯೇ ಸಂಭಾಷಿಸುತ್ತಾರೆ. ಇನ್ನೊಂದು ನಂಬರಿನ ಬಸ್ಸು ಓವರ್ ಟೇಕ್ ಮಾಡಿದರೆ ಸೈತೆ ಮೂಜಿಕಾಸ್ದಯೆ...ಬ್ಯಾ....ಇತ್ಯಾದಿ ಶಬ್ದ ಉಪಯೋಗಿಸುವವರೂ ಇದ್ದಾರೆ ಹೊರರಾಜ್ಯದಿಂದ ಕಾರ್ಮಿಕರು ವಲಸೆ ಬಂದ ಕಾರಣ ತುಳು ಮರೆತು ಹಿಂದಿಯಲ್ಲಿಯೇ ಬಹುತೇಕರಲ್ಲಿ ಟಿಕೇಟು ಕೇಳುತ್ತಾರೆ.ತುಳುವರನ್ನೂ ಕಿದರೆ ಬಯ್ಯ ಎಂದು ಮುಖ ನೋಡುತ್ತಾರೆ! ತುಳುವನ್ನೆ ಮರೆಯುತ್ತಾರೆ!!

ಶಾಲಾ ಮಕ್ಕಳ ಜೊತೆ ಸಲುಗೆಯಿಂದ ವರ್ತಿಸುವಾಗ ವಿಚಿತ್ರ ಅನಿಸುತ್ತದೆ(ಬಸ್ಸಿನಲ್ಲಿ ದಿನಾ ಬರುವವರು ಆಪ್ತರಾಗಿದ್ದರೂ ಅದನ್ನು ಸಾರ್ವಜನಿಕವಾಗಿ ಸ್ನೇಹಿತರೆಂದು ಗುರುತಿಸಬೇಕೆಂದೆನೂ ಇಲ್ಲ) ಭಾಷೆಗೊತ್ತಿಲ್ಲದ ಪ್ರಯಾಣಿಕರು ಬಂದರೆ ಅವರನ್ನು ತುಳುವಿನಲ್ಲಿ ತಮಾಷೆಯ ವಸ್ತುವಿನಂತೆ ಪರಿಗಣಿಸಿ ಜೊತೆಗೆ ಚಿಲ್ಲರೆ ಕೊಡದೆ ಸತಾಯಿಸುತ್ತಾರೆ. ಕೆಲವೊಮ್ಮೆ ತಮ್ಮ ಬಳಗದ ಸ್ನೇಹಿರೆಂದುಕೊಂಡವರು ಬಸ್ಸಿನ ಎರಡೂ ಬಾಗಿಲಿನಲ್ಲಿ ನೇತಾಡಿಕೊಂಡು ಬೊಬ್ಬೆ ಹೊಡೆಯುತ್ತಾರೆ. ನಾನು ಎಲ್ಲಾ ಕಂಡಕ್ಟರ್ ಗಳನ್ನು ದೂರುವುದಿಲ್ಲ. ಅನುಭವಿಗಳು ಶಿಸ್ತುಬದ್ದವಾಗಿ ಇರುತ್ತಾರೆ. ಹೊಸದಾಗಿ ಸೇರಿಕೊಳ್ಳುವ ಕಂಡಕ್ಟರ್ ಗಳಿಗೆ ತರಬೇತಿಯ ಅವಶ್ಯಕತೆ ಇದೆ ಎಂದು ತೋರುತ್ತಿದೆ.ಸಾರ್ವಜನಿಕವಾಗಿ ಬಳಸುವ ಭಾಷೆ ಮತ್ತು ನಡೆದುಕೊಳ್ಳುವ ರೀತಿ ಇತರರಿಗೆ ಮಾದರಿಯಾದರೆ ಒಳ್ಳೆಯದಲ್ಲವೆ? ಪ್ರಯಾಣಿಕರ ಬಗ್ಗೆ ಮುಂದಿನವಾರ ಬರೆಯುವೆ. ನಮಸ್ಕಾರ

ಕೈ ಚೀಲಕ್ಕೆ 5ವರ್ಷ ಆಯಿತು!!

ರಾಜ್ಯ ಸರಕಾರ ಎಲ್ಲ ರೀತಿಯ ಪ್ಲಾಸ್ಟಿಕ್ ಬ್ಯಾಗ್ ಗಳ ನಿಷೇಧ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿರುವ ಸಂಗತಿ.ಆದರೂ ನಗರದ ಕೆಲವು ಕಡೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಅಲ್ಲಲ್ಲಿ ಕಂಡುಬರುತ್ತಿದೆ. ಮೊನ್ನೆ ನಾನು ಕೇಂದ್ರ ಮಾರುಕಟ್ಟಿಯತ್ತ ಹೋಗಿದ್ದೆ. ಕೆಲವರು ಸಾಮಾನ್ಯ ಪ್ಲಾಸ್ಟಿಕ್ ನಲ್ಲಿ ಮಾರುಕಟ್ಟೆಯಿಂದ ತರಕಾರಿಗಳನ್ನು ವಿಶೇಷವಾಗಿ ಹಣ್ಣುಗಳನ್ನು ಖರೀದಿಮಾಡಿಕೊಂಡು ಹೋಗುತ್ತಿದ್ದರು.ಬಹುತೇಕ ಯುವ ಸಮುದಾಯ ಹೆಚ್ಚಾಗಿತ್ತು .ಈ ನಡುವೆ ಹಿರಿಯರೋರ್ವರು ತರಕಾರಿ ಸೊಪ್ಪು ಖರೀದಿಸಲು ಬಂದಿದ್ದನ್ನು ನಾನು ಗಮನಿಸಿದೆ.ಅವರು ಬರೀ ಕೈಯಲ್ಲಿ ಬಂದಿರಲಿಲ್ಲ .ಕೈ ಚೀಲ ತಂದಿದ್ದರು. "ಚೀಲ ಬಾರಿ ಮಲ್ಲೆ ಉಂಡತ್ತಾ"(ಚೀಲ ತುಂಬಾ ದೊಡ್ಡದಿದೆಯಲ್ಲಾ?) ಎಂದು ತುಳುವಿನಲ್ಲಿ ನಾನು ಕೇಳಿದಕ್ಕೆ ಅವು ಇನಿ ಕೋಡೆದವು ಅತ್ತ್ ಈ ಚೀಲೊಗು ಐನ್ ವರ್ಸ ಕರೀಂಡ್ (ಅದು ಇಂದು ನಿನ್ನೆಯದಲ್ಲ ಈ ಕೈ ಚೀಲಕ್ಕೆ ಐದು ವರ್ಷ ಆಯಿತು) ಎಂದರು.ಅವರ ಹೆಸರು ಊರು ಕೇಳುವುದಕ್ಕೂಆ ಸಂದರ್ಭದಲ್ಲಿ ಆಗಿಲ್ಲ!
ನಿಜವಾಗಿ ಈ ಹಿರಿಯರೋರ್ವರ ಮಾತು ಮತ್ತು ಅವರ ಪರಿಸರ ಕಾಳಜಿ ನನಗೆ ತುಂಬಾ ಇಷ್ಟವಾಯಿತು .ಈಗಿನ ಜಾಯಮಾನದ ಜನರೆಲ್ಲ ಶಾಪಿಂಗ್ ಹೋಗಬೇಕಾದರೆ ಅಭ್ಯಾಸ ಬಲದಿಂದ ಬರೀ ಕೈಯಲ್ಲಿ ಹೋಗುವ ಕಾಲ. ಒಂದೊಂದು ವಿಧದ ವಸ್ತು,ತರಕಾರಿಗಳಿಗೆ ಒಂದೊಂದು ಪ್ಲಾಸ್ಟಿಕ್ ಚೀಲದ ಜೊತೆಗೆ ಮನೆ ಸೇರುತ್ತಾರೆ. ನಗರದ ಕೆಲವು ಅಂಗಡಿಗಳ ಮಾಲೀಕರು, ಗ್ರಾಹಕರಿಗೆ ಖಡಕ್ ಆಗಿ ಪ್ಲಾಸ್ಟಿಕ್ ಚೀಲ ಇಲ್ಲವೇ ಇಲ್ಲ ಎನ್ನುತ್ತಾರೆ .


ಕೆಲವು ಮಾಲೀಕರು ಗ್ರಾಹಕರಿಗೆ ಪರ್ಯಾಯವಾಗಿ ಬಟ್ಟೆ ಚೀಲಗಳನ್ನು ಒದಗಿಸುತ್ತಿದ್ದಾರೆ. ಮತ್ತೆ ಕೆಲವರು ತಮ್ಮಲ್ಲಿರುವ ಚೀಲಗಳನ್ನೇ ಕೊಟ್ಟು, 'ಪುನಃ ತಂದುಕೊಡಬೇಕು' ಎಂದು ಸಲಹೆ ನೀಡುತ್ತಿದ್ದಾರೆ. ಬೇಕರಿಗಳಲ್ಲಿ ಚೀಲದ ಬದಲು ಕಾಗದದ ಬ್ಯಾಗ್ ಬಳಕೆಯಾಗುತ್ತಿದೆ.ಇತ್ತೀಚೆಗೆ ಮಂಗಳೂರು ಮಹಾ ನಗರ ಪಾಲಿಕೆ ವತಿಯಿಂದ ಪ್ಲಾಸ್ಟಿಕ್ ನಿರ್ಮೂಲನೆ ಜಾಗೃತಿ ಆಂದೋಲನ ನಡೆಸಲು, ಬಟ್ಟೆ ಚೀಲ ವಿತರಿಸಲು ಮುಂದಾಗಿ. ಸಾಮಾನ್ಯ ಸಭೆಯಲ್ಲಿ ಮೇಯರ್ ಬಟ್ಟೆ ಚೀಲ ಬಿಡುಗಡೆ ಮಾಡಿ, ಪಾಲಿಕೆ ಸದಸ್ಯರಿಗೆ ಹಸ್ತಾಂತರಿಸಿರುವ ಕಾರ್ಯ ನಡೆದಿತ್ತು. ಪ್ರಥಮ ಹಂತದಲ್ಲಿ 15,000 ಬಟ್ಟೆಯ ಚೀಲವನ್ನು ಶಾಲೆ ಮಕ್ಕಳ ಮುಖಾಂತರ ಮಂಗಳೂರು ಪಾಲಿಕೆ ವ್ಯಾಪ್ತಿಯ ಮನೆ ಮನೆಗೆ ತಲುಪಲು ಕ್ರಮ ಕೈಗೊಳ್ಳಲಾಗಿದೆ.ಇದು ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ.
ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ, ತಯಾರಿಕೆ, ಮಾರಾಟ ಹಾಗೂ ಉಪಯೋಗ ಸಂಪೂರ್ಣ ನಿಷೇಧವಿದ್ದರೂ ಬಳಕೆಯಾಗುತ್ತಿದೆ .ಇಲ್ಲಿ ನಮ್ಮ ಪ್ರತಿ ಸಾರಿಯ ಚಾಲಿಯಂತೆ ಸರಕಾರವನ್ನು,ಅಂಗಡಿ ಮಾಲಿಕರನ್ನು,ನಗರಾಡಳಿತವನ್ನು ದೂರಿ ಪ್ರಯೋಜನವಿಲ್ಲ . ಸಾರ್ವಜನಿಕರು ಬಳಸುವುದಿಲ್ಲ ಎಂದರೆ, ಅಂಗಡಿ ಮಾಲಿಕರು ಕೊಡುವುದೇ ಇಲ್ಲ .ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಹಾಗೂ ಮಂಗಳೂರನ್ನು ಸ್ವಚ್ಛ ನಗರವಾಗಿ ಮಾಡಲು ನಾವೆಲ್ಲರೂ ಕೈ ಜೋಡಿಸಬೇಕಿದೆ. ಸ್ತ್ರೀಶಕ್ತಿ ಸಂಘಗಳು, ಮಹಿಳಾ ಸಂಘಟನೆಗಳು, ಹೊಲಿಗೆ ಕಲಿತಿರುವವರು ಕೈ ಚೀಲಗಳನ್ನು ಹೊಲಿದು ಅಂಗಡಿಗಳಿಗೆ ಮಾರಾಟ ಮಾಡಿದರೆ ಸಣ್ಣ ಬದಲಾವಣೆಯಾದರೂ ನಿರೀಕ್ಷಿಸಬಹುದು.