Wednesday, May 31, 2017

ನಿಜ ಹೇಳಿ ಪಾರ್ಟಿ ಮಾಡಿದ್ದು ನೀವೆನಾ? ಸಾಕ್ಷಿ ಹೇಳುತ್ತಿವೆ ಖಾಲಿ ಬಾಟಲಿಗಳು!

ಕಡಬದಿಂದ :- VK KADABA
ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಪು....ಅಂತ ಯೋಗರಾಜ ಭಟ್ಟರ ಹಾಡು ನೀವೆಲ್ಲ ಕೇಳಿದ್ದಿರಿ ಮತ್ತು ಹಾಡಿಗೆ ಕೆಲವರು ಹೆಜ್ಜೆಯೂ ಹಾಕಿದ್ದಿರಿ ಆದ್ರೆ   ಹಾಡಿನ ಕುರಿತಾಗಿ  ನಾನು ಬರೆಯುತ್ತಿಲ್ಲ. ನಾನು ಬರೆಯೊ ಸಂಗತಿಯೇ ಬೇರೆನಿಮಗೆಲ್ಲ ಗೊತ್ತಿರುವ  ಹಾಗೇ ನಮ್ಮ ಸುತ್ತಮುತ್ತ  ಯಾವುದಾದರೂ ಒಂದು ನಮೂನೆಯ ಪಾರ್ಟಿಗಳು ಆಗಾಗ ನಡೆಯುತ್ತ ಇರುತ್ತದೆ .ಹೈ-ಫೈ ಗುಂಡು ಪಾರ್ಟಿ   ಸುದ್ದಿಯಾಗದೆ ಎಲ್ಲಾ ಕಡೆ ನಡೆಯುತ್ತಲೇ ಇರುತ್ತದೆಮೊನ್ನೆ ವಾಮಂಜೂರು ವ್ಯಾಪ್ತಿಯ ಗುಡ್ಡದಲ್ಲಿ  ಸಂಭ್ರಮಕ್ಕಾಗಿಯೋ  ಅಥವಾ ಬೇರೆ ಕಾರಣಕ್ಕಾಗಿಯೋ  ಒಟ್ಟಿನಲ್ಲಿ ಭರ್ಜರಿ ಪಾರ್ಟಿಯೊಂದು ನಡೆದಿದೆ.  ಅದು ಕಿರಿಕ್ ಪಾರ್ಟಿ  ಅಲ್ಲದಿದ್ದರೂ ಅನುಮತಿ ರಹಿತ ಮದ್ಯದ ಪಾರ್ಟಿ . ಸಾಕ್ಷಿಗಾಗಿ ಉಳಿದಿರುವುದು  ಮರ್ವಯಿ ಗಸಿ ಮತ್ತು ಲೆಕ್ಕಕ್ಕೆ ಸಿಗದ ಖಾಲಿ  ಬೀರು ಬಾಟಲಿಗಳು!
 ಖಾಲಿ ಬೀರು ಬಾಟಲಿಗಳು ಚಿತ್ರ :-ಸಿಂಚನಾ ಶ್ಯಾಂ
 ಗಮನಿಸಿದ ಬೇಕಾದ ವಿಚಾರವೆಂದರೆ  ಮಂಗಳೂರಿನ ಪಡೀಲ್ ಹೋಮ್ ಸ್ಟೇ ದಾಳಿಯ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿ ವೀಕೆಂಡ್ ಪಾರ್ಟಿಗಳ ಮೇಲೆ ಕಡಿವಾಣ ಹಾಕಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಇಂತಹ ಪಾರ್ಟಿಗಳ ಆಯೋಜನೆಗೆ ನಿರ್ಬಂಧ ಹೇರಿದೆ . ಇಲಾಖೆ ಹೊರಡಿಸಿರುವ ಆದೇಶದಲ್ಲಿ ಪಣಂಬೂರ್ ಬೀಚ್, ಪಿಲಿಕುಳ ನಿಸರ್ಗಧಾಮ ಸೇರಿದಂತೆ ಹೋಮ್ ಸ್ಟೇಗಳಲ್ಲಿ ಪಾರ್ಟಿಗಳನ್ನು ನಡೆಸದಂತೆ ನಿರ್ಬಂಧ ಹೇರಿದೆ. ಜೊತೆಗೆ ಮನೆ ಹೊರತುಪಡಿಸಿ ಬೇರೆಡೆ ಪಾರ್ಟಿ ಮಾಡವುದಾದರೆ ಪೊಲೀಸರಿಂದ ಪೂರ್ವಾನುಮತಿ ಪಡೆಯುವುದು ಈಗ ಕಡ್ಡಾಯ.  ಅಪಾರ್ಟ್ಮೆಂಟ್, ರೆಸಾರ್ಟ್, ಪಬ್ ಹಾಗೂ ರೆಸ್ಟೊರೆಂಟ್ ಅಥವಾ ಹೋಟೆಲ್ ಗಳಲ್ಲಿ ಪಾರ್ಟಿ ಮಾಡಲು ಪೊಲೀಸ್ ಅನುಮತಿ ಅಗತ್ಯವಾಗಿದೆ.  ಪಾರ್ಟಿಯಲ್ಲಿ ಭಾಗವಹಿಸುವ ಒಟ್ಟು ಜನರ ಸಂಖ್ಯೆ, ವಿವರ, ಬಳಸುವ ಧ್ವನಿವರ್ಧಕ ವ್ಯವಸ್ಥೆ ,ಡಿಜೆ ಡ್ಯಾನ್ಸ್ , ಅಲ್ಕೋಹಾಲ್ ನೀಡಲಾಗುತ್ತದೆಯೇ ಮುಂತಾದ ವಿಷಯಗಳನ್ನು ಮೊದಲೇ  ಅರ್ಜಿಯಲ್ಲಿ ತಿಳಿಸಬೇಕಾದುದು ಅಗತ್ಯ.  ಆ ಬಳಿಕ ಅರ್ಜಿಯನ್ನು ಪರೀಶಿಲಿಸಿ ಪುರಸ್ಕರಿಸುವುದು ಅಥವಾ ಅನುಮತಿ ನೀಡದೆ ತಿರಸ್ಕರಿಸುವ ಅಧಿಕಾರ ಪೊಲೀಸರಿಗೆ ಇರುತ್ತದೆ.  ಜೊತೆಗೆ  ಪಾರ್ಟಿ ಮಾಡುವ  ಸ್ಥಳದ  ನೆರೆ ಹೊರೆಯವರಿಂದ  NOC  ಕೂಡಾ ಬೇಕಾಗುತ್ತದೆ.   15 ಕ್ಕಿಂತ ಅಧಿಕ ಮಂದಿ ಒಂದೆಡೆ ಸೇರಿ ಪಾರ್ಟಿ ಮಾಡುವುದಿರಲಿ ಅಥವಾ ಕಡಿಮೆ ಬಜೆಟ್ ನಲ್ಲಿ ಒಟ್ಟಿಗೆ ಕುಳಿತು ಮದ್ಯ ಸೇವನೆ ಮಾಡುವುದಿರಲಿ ನಿಯಮ ಮೀರಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ .ನಿಜವಾಗಿ ಪಾರ್ಟಿ ಆಯೋಜಿಸುವವರು ಕಾನೂನು ಪಾಲನೆ ಮಾಡುತ್ತಾರೆಯೆ? ಈಗೀಗ  ಅನುಮತಿ ರಹಿತ  ಮದ್ಯ ಪಾರ್ಟಿಗಳಲ್ಲಿ  ಹಲವು ಯುವಕರು ಹಾಗೂ ಯುವತಿಯರು  ಭಾಗವಹಿಸುತ್ತಿರುವುದು ಆತಂಕದ ವಿಷಯ. ಅದರಲ್ಲೂ ಕಾಲೇಜು ಓದುವ ಮಕ್ಕಳ ಸಂಖ್ಯೆಯೂ ಹೆಚ್ಚಿದೆ ಎನ್ನುವ ಸತ್ಯ ಸಂಗತಿಯನ್ನು ಬಹುತೇಕರು ನಂಬುವುದಿಲ್ಲ. ಸಮಸ್ಯೆಗಳು ಆದಾಗ ಮಾತ್ರ  ಇಲಾಖೆ ಮತ್ತು ಜನರು  ಎಚ್ಚೆತ್ತುಕೊಳ್ಳುತ್ತಾರೆ.
ಯುವ ಸಮುದಾಯಕ್ಕೆ ಪಾರ್ಟಿಗೆ ಹೋಗಬೇಡಿ  ಎಂದು ಉಪದೇಶಿಸಲಾಗದು.ಯಾಕೆಂದರೆ " ದುಡ್ಡು ಕೊರ್ಪಾನ " ಅಥವಾ "ಈ ಪಾರ್ಟಿ ಕೊರ್ಪನಾ" ಎಂದು ಸಾಮೂಹಿಕ ಉತ್ತರ ಸಿಗುತ್ತದೆ. ಕುಡಿಯುವುದರಿಂದ  ಮತ್ತು ಕೆಲವೊಮ್ಮೆ ಮದ್ಯ ಪಾರ್ಟಿಯಿಂದ ಆಗುವ ತೊಂದರೆಗಳ ಬಗ್ಗೆ ತಿಳಿ ಹೇಳುವ ಪ್ರಯತ್ನ ಮಾಡಬೇಕಷ್ಟೆ. ಮೊನ್ನೆಯ ಪಾರ್ಟಿಯಲ್ಲಿ ಒಂದು ಮಾಹಿತಿಯ ಪ್ರಕಾರ ಪಾರ್ಟಿಯಲ್ಲಿ ಮೀಸೆ ಚಿಗುರುವ ಯುವಕರ ಸಂಖ್ಯೆ ಯೇ ಹೆಚ್ಚಿತ್ತು .   ಯಾವುದೇ ಪಾರ್ಟಿಗೆ ಹೆತ್ತವರು ಮಕ್ಕಳನ್ನು ರಾತ್ರಿ ಹೊತ್ತು ಕಳುಹಿಸುವುದೇ ಇಲ್ಲ.  ಆಪ್ತ ಸ್ನೇಹಿತನ  ಮನೆಯಲ್ಲಿ ಕಾರ್ಯಕ್ರಮವಿದೆ ಎಂದು ಸುಳ್ಳು ನೆಪ ಹೇಳಿದರೆ  ಮಾತ್ರ ಮನೆಯಲ್ಲಿ ಹೊರಗಡೆ ಹೋಗಲು ಗ್ರೀನ್ ಸಿಗ್ನಲ್ ಸಿಗುತ್ತದೆ. ಬಹುತೇಕರು ಮನೆಯಲ್ಲಿ ಸುಳ್ಳು ಹೇಳಿಯೆ  ಪಾರ್ಟಿಗಳಿಗೆ ಹಾಜರಾಗುತ್ತಾರೆ. ಮೋಜು ಮಸ್ತಿ ಮನಸ್ಸಿಗೆ ಖುಷಿ ಕೊಡುತ್ತದೆ ನಿಜ ಆದ್ರೆ ಅದು ಒಂದು ಕವಲು ದಾರಿಗೆ ಪ್ರೇರೇಪಿಸಲು ಸಾಧ್ಯವಿದೆ ಎಂಬುದನ್ನು ಮರೆಯಬಾರದು. ಪಾರ್ಟಿಗಳಲ್ಲಿ ಪಾಲ್ಗೊಂಡು ಆಗುವ ಅನಾಹುತಗಳನ್ನು ತಪ್ಪಿಸಬೇಕು .ಈ ಬಗ್ಗೆ ಹೆತ್ತವರೂ ಮಕ್ಕಳ ಬಗ್ಗೆ ಗಮನಹರಿಸಬೇಕು. ಒಮ್ಮೆ  ನಿಜ ಹೇಳಿ ಪಾರ್ಟಿ ಮಾಡಿದ್ದು ನೀವೆನಾ?!

Monday, May 29, 2017

ಕಟ್ಟಿಗೆ ಸೀಳುವವರು ನಿಮ್ಮ ಮನೆಗೆ ಬರುತ್ತರಾ?

ಹಳ್ಳಿ ಬದುಕಿನಲ್ಲಿ  ಜನರ ಬದುಕು ಆಲೋಚನೆ ಕೆಲಸ ಮತ್ತು  ಕಾರ್ಯಕ್ರಮಗಳು... ಹೀಗೆ ಎಲ್ಲವೂ ವಿಬಿನ್ನ . ಅದನ್ನು ಪಟ್ಟಣದ ಬದುಕಿಗೆ ತುಲನೆ ಮಾಡುವುದು ಕಷ್ಟದಾಯಕ ಮತ್ತು ಅಸಮಂಜಸ. ಕೂಡ. ಹಳ್ಳಿಗಳಲ್ಲಿ ಮಳೆಗಾಲ ಆರಂಭವಾಗುವ ಮುಂಚೆ ಒಣ ಕಟ್ಟಿಗೆಯ ದಾಸ್ತಾನು ಮಾಡುವುದು ರೂಢಿ . ತುಳುವರ ಪತ್ತನಾಜೆಯ ಆಸುಪಾಸಿನಲ್ಲಿ ಮಳೆಗಾಲದ ತಯಾರಿಯ ಒಂದು ಭಾಗವಾಗಿ  ಕಟ್ಟಿಗೆ ಸಂಗ್ರಹಿಸುವ ಕೆಲಸವಂತೂ  ಭರ್ಜರಿಯಾಗಿ ನಡೆಯುತ್ತದೆ.  ಕಟ್ಟಿಗೆಯ ತಯಾರಿ ಬಗ್ಗೆ ಮೊದಲು ತಲೆ ಕೆಡಿಸಿಕೊಳ್ಳುವುದು ಹೆಚ್ಚಾಗಿ ಮನೆಯ ಹೆಂಗಸರು. ಅಡುಗೆ ಕೋಣೆಯಲ್ಲಿ ಹೆಚ್ಚು ಹೊತ್ತು ಕೆಲಸದ ನಿರ್ವಹಣೆ ಮಹಿಳೆಯರದ್ದು. ಹಾಗಾಗಿ ಜೋರಾಗಿ ಮಳೆ ಸುರಿಯುವಾಗ ಅಡುಗೆ ತಯಾರಿಯಾಗಬೇಕಾದರೆ ಓಲೆಯಲ್ಲಿ ಬೆಂಕಿ ಹೊತ್ತಿ  ಉರಿಯಬೇಕು.  ಒಂದು ವೇಳೆ ನೀರು ಎಳೆದ ಕಟ್ಟಿಗೆ ಇದ್ದರೆ ಬರೇ ಹೊಗೆ ಮಾತ್ರ ಬರುವುದು .ಊದಿ ಊದಿ ಸುಸ್ತಾಗುವ ಆ ಯಾತನೆ ಮಾತ್ರ  ಪದಗಳಲ್ಲಿಯೂ ಕಟ್ಟಿಕೊಡಲಾಗದು. ಹೆಚ್ಚಾಗಿ ಹತ್ತಿರದ ಕಾಡಿನಿಂದ ಒಣ ಕಟ್ಟಿಗೆಯನ್ನು ಸುತ್ತ ಮುತ್ತಲಿನ ಮಹಿಳೆಯರೆಲ್ಲ ಸೇರಿ ದೂರದಿಂದ ಕಟ್ಟಿಗೆ ಹೊತ್ತುಕೊಂಡು ಬರುತ್ತಾರೆ. 
ಹಳ್ಳಿಗಳಲ್ಲಿ  ಕೆಲವೊಮ್ಮೆ ಮನೆಯ  ಜಾಗದಲ್ಲೇ ಇರುವ ಕಟ್ಟಿಗೆಗೆ ಯೋಗ್ಯವಾದ ಮರಗಳನ್ನು ಕಡಿಯುತ್ತಾರೆ. ಇದರ ಜೊಗೆಗೆ ತೆಂಗಿನ ಮರದ ಕೊತ್ತಲಿಗೆ,ತಿಂಗಿನ ಕಾಯಿ ಸಿಪ್ಪೆ,ಅಡಿಕೆ ಹಾಳೆಯನ್ನೂ ಸಂಗ್ರಹಿಸುತ್ತಾರೆ.  ಈಗೀಗ ಮರ ಕೊಯ್ಯುವ ಹೊಸ ಮೆಶಿನ್ ಗಳು ಬಂದ ಕಾರಣ ಗರಗಸ ಮನೆಯ ಅಟ್ಟದಲ್ಲೋ ಅಥವಾ ಕೊಟ್ಟಿಗೆಯ ಮೂಲೆಯಲ್ಲೋ ಸೇರಿಕೊಂಡದ್ದು ಮಾತ್ರ ಸುಳ್ಳಲ್ಲ.  ಕೆಲವು ಕಡೆಗಳಲ್ಲಿ ಮರದ ಮಿಲ್ಲುಗಳಲ್ಲಿ ತುಂಡರಿಸಿದ ಕಟ್ಟಿಗೆಗಳು ಸಿಗುತ್ತವೆ .ದುಬಾರಿಯಾದರೂ ಅನಿವಾರ್ಯವೆಂಬಂತೆ ತೆಗೆದುಕೊಳ್ಳುತ್ತಾರೆ. ಇಲ್ಲಿ ಮತ್ತೊಂದು ಬಹಳ ಮುಖ್ಯವಾದ ವಿಷಯ ಏನಂದ್ರೆ ಕಟ್ಟಿಗೆಯನ್ನು ಭಾಗ ಮಾಡುವವರು ಅಥವಾ ಸೀಳುವವರು ಸಿಗುವುದು ಈಗೀಗ ಬಾರೀ ಅಪರೂಪ.  ಹಳ್ಳಿಗಳಲ್ಲಿ ಈ ಮರದ ದಿಣ್ಣೆಗಳನ್ನು ಸೀಳಲು ಮಾನವ ಸಂಪನ್ಮೂಲವನ್ನೆ ಇಂದಿಗೂ  ಅವಲಂಬಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಕಟ್ಟಿಗೆ ಭಾಗ ಮಾಡುವ ಶ್ರಮಗಳು ಅಲ್ಲಲ್ಲಿ ಕಾಣಸಿಗುತ್ತಿದ್ದರು . ಆದರೆ ಬದಲಾದ ಈ ಸಮಯದಲ್ಲಿ ಪಳಗಿದ ಗಟ್ಟಿ ಶರೀರದ ಅನುಭವಿಗಳು ಎಷ್ಟಾದರೂ ಕಡಿಮೆಯೇ. ಕಟ್ಟಿಗೆಯನ್ನು ಬೇಕಾದ ರೀತಿಯಲ್ಲಿ ತುಂಡು ಮಾಡುವ ಕಾಯಕ ಸುಲಭವಲ್ಲ ,ಅದಕ್ಕೆ ಗಟ್ಟಿಮುಟ್ಟಾದ ಶರೀರ ಜೊತೆಗೆ ಸಾಮರ್ಥ್ಯವೂ ಬೇಕು. ಕಟ್ಟಿಗೆಯನ್ನು ಬರೇ  ಕೊಡಲಿಯಿಂದ ಮಾತ್ರ ಭಾಗಮಾಡಲಾಗದು ಇದರ ಜೊತೆಗೆ ಕಬ್ಬಿಣದಿಂದ ತಯಾರಿಸಿದ ಚೆಮ್ಮಟಿಯನ್ನು ಬಳಸುತ್ತಾರೆ . ಬೆರಳೆಣಿಕೆಯ ಮಂದಿ ಈ ವೃತ್ತಿಯನ್ನು ಮಾಡುವ ಕಾರಣಕ್ಕಾಗಿ ಈಗ ಅವರ ಸಂಬಳವೂ ದುಪ್ಪಡ್ಡಾಗಿದೆ . ಮತ್ತು ಬೇಡಿಕೆಯೂ ಹೆಚ್ಚಿದೆ. ಸಾಮಾನ್ಯವಾಗಿ ಈಗ ಕಟ್ಟಿಗೆ ಸೀಳುವ ಅನುಭವಿಗೆ ಈಗ 600 ರೂ ಯಿಂದ 1,000 ಇದೆ  .
ಬೆಳಿಗಗ್ಗಿನ   ಕಾಫಿ ತಿಂಡಿ ,ಮಧ್ಯಾಹ್ನದ  ಊಟ , ಸಾಯಂಕಾಲ ಮತ್ತೆ ಕಾಫಿ ಅಥವಾ ಚಹಾ ಜೊತೆಗೆ ಸಂಬಳ ಇದು ಹಳ್ಳಿಗಳಲ್ಲಿ ಇಂದಿಗೂ ಕಟ್ಟಿಗೆ ಸೀಳುವ ಕಾರ್ಮಿಕನಿಗೆ ನೀಡುವ ಒಂದು ದಿನದ ಪ್ಯಾಕೆಜ್ . ತಂತ್ರಜ್ಞಾನ ಎಷ್ಟೂ ಮುಂದುವರಿದರೂ ಕೂಡ  ಮಾನವ ಶ್ರಮ ಇಂತಹ ಕಷ್ಟಕರ  ಕೆಲಸಗಳಿಗೆ ತೀರ ಅಗತ್ಯವಾಗಿದೆ ಎಂಬುದನ್ನು ಮರೆಯುವಂತಿಲ್ಲ.  ನಾನು ಮೊದಲ ವರ್ಷದ ಪದವಿ ತರಗತಿ ಓದುತ್ತಿದ್ದಾಗ ಒಮ್ಮೆ ಕಟ್ಟಿಗೆ ಕಡಿಯಲೆಂದು ಪಕ್ಕದ ಮನೆಯ ಅನುಭವಿ ಕೆಲಸದವರೊಂದಿಗೆ ಹೋಗಿದ್ದೆ . ಆಗ ಕಟ್ಟಿಗೆಗೆ ಕೊಡಲಿಯ ಏಟು ಸರಿಯಾಗಿ ಸಿಗದೆ ಒಮ್ಮೆ ಅತ್ತ ಮತ್ತೊಮ್ಮೆ ಇತ್ತ ಹೋಗುತ್ತಿತ್ತು . ಕೊನೆಗೆ ಮೊದಲು ಕೊಡಲಿ ಹಿಡಿಯುವುದನ್ನು ಆ ಅನುಭವಿ ಹೇಳಿಕೊಟ್ಟರು . ಆಗಲೇ  ಗೊತ್ತಾಗಿದ್ದು ನನಗೆ ಕೊಡಲಿ ಹಿಡಿಯುವುದೂ  ಒಂದು ಕಲೆ ಎಂದು !  ಮರುದಿನ ಮೈ ಕೈ ತುಂಬಾ ನೋವು  ಮಧ್ಯಾಹ್ನ ದ ವರೆಗೂ ಎದ್ದೇಳಲಿಲ್ಲ !  ಈಗಲೂ   ಕಟ್ಟಿಗೆ ತುಂಡು ಮಾಡುವವರು ಸಿಕ್ಕಿದಾಗ ಆ ನೆನಪು ಹಾಗೇ ಒಮ್ಮೆ ಕಣ್ಣ ಮುಂದೆ ಬಂದು ಹೋಗುತ್ತದೆ. ಈಗ ಬಹುತೇಕ ಹಳ್ಳಿ ಮನೆಗಳಲ್ಲಿಯೂ ಗ್ಯಾಸ್ , ಕರೆಂಟ್ ಸ್ಟವ್ ಇನ್ನಿತರ ಆಧುನಿಕ ಸಲಕರಣೆಗಳು ಬಂದಿವೆ.ಬಿಸಿ ನೀರು ಕಾಯಿಸಲು ಈಗ ಬೆಂಕಿಯೇ ಉರಿಸಬೇಕಾಗಿಲ್ಲ.ಗ್ಯಾಸ್ ಗೀಸರ್ ಕೂಡ ಬಳಕೆಯಲ್ಲಿವೆ. ತಂತ್ರಜ್ಞಾನ ಬರುತ್ತಿದ್ದರೂ ಇಂದಿಗೂ ಕಟ್ಟಿಗೆಯಲ್ಲಿಯೇ ಅಡುಗೆ ಮಾಡುವ ಸಂಪ್ರದಾಯ ಮತ್ತು ಪದ್ದತಿ ಇಂದಿಗೂ ಇದೆ.  ಹೊಸ ತಲೆ ಮಾರಿನ ಜನ  ಶ್ರಮ ಪಡುವ ಕೆಲಸಗಳಿಗೆ ಮತ್ತು ಕಟ್ಟಿಗೆ ಹೋರುವುದಕ್ಕೆ ಈಗ  ಹೋಗುವುದಿಲ್ಲ . ಏನಿದ್ದರೂ ಕಡಿಮೆ ಸಮಯದಲ್ಲಿ ಹೆಚ್ಚು ಸಂಪಾಡಿಸುವ ಗುರಿ. ಮತ್ತು ಆರಾಮವಾಗಿ ಇರಬೇಕೆನ್ನುವ ಇರಾದೆ. ಮಳೆಗಾಲದಲ್ಲಿ ಬಿಸಿ ಬಿಸಿ ಅಡುಗೆಯನ್ನೇ ಬಯಸುವ ಕೆಲವು  ಮನೆ ಸದಸ್ಯರು ಕಟ್ಟಿಗೆ ವಿಷಯದಲ್ಲಿ ಮಾತ್ರ ತಲೆಕೆಡಿಸುಕೊಳ್ಳುವುದಿಲ್ಲ! 
ವಿ.ಕೆ ಕಡಬ