Thursday, June 22, 2017

ಗೋಂಕುರು ಕಪ್ಪೆ ಮತ್ತು ಪನಿಕಪ್ಪೆಗಳ ಮಳೆಗಾಲದ ಸಂಗೀತ ಸಮ್ಮೇಳನ!

VK KADABA:-
"ಬೀಲ ಉದುರಂದೆ ಕಪ್ಪೆ ಆವಂದ್" (ಬಾಲ ಉದುರದೆ ಕಪ್ಪೆ ಆಗುವುದಿಲ್ಲ) ಇದು ತುಳುವರ ಒಂದು ಗಾದೆಯಾಗಿದೆ .ಕಪ್ಪೆ ಕರ ಕರ ತುಪ್ಪ ಜಲಿ ಜಲಿ  ಹಾಡು ಈಗ ನೆನಪಾಗುತ್ತಿದೆ. ಮಳೆಗಾಲ ಆರಂಭವಾಗಿದ್ದೇ ತಡ ಕಪ್ಪೆಗಳ ಆರ್ಭಟ ಬಾರಿ ಜೋರು ಶುರುವಾಗಿದೆ.  ಹಗಲಿನಲ್ಲಿ ದಮ್ ತೆಗೆಯದ ಕಪ್ಪೆಗಳು ಸಾಯಂಕಲ ಆಗುತ್ತಿರುವಾಗಲೇ ಅಪರೂಪಕ್ಕೆ ಒಂದೊಂದು ಸದ್ದು ಮಾಡಲು ಶುರು ಮಾಡುತ್ತವೆ. ರಾತ್ರಿ ಆದ ಮೇಲೆ ಗುಂಪಿನಲ್ಲಿ ಗೋವಿಂದ ಎನ್ನುವ ಹಾಗೇ  ಕಪ್ಪೆಗಳ ಬೊಬ್ಬೆಯಲ್ಲಿ ಇತರ ಕೀಟಗಳ ಸದ್ದು ಶೂನ್ಯ!  ನಮ್ಮ ಊರಿನಲ್ಲಿ ದೊಡ್ಡ ಕಪ್ಪೆಗೆ ಗೊಂಕುರು ಕಪ್ಪೆ ಅಥವಾ ಡೊಂಕುರು ಕಪ್ಪೆ ಎಂದು ಕರೆಯುತ್ತಾರೆ. ಸಣ್ಣ ಕಪ್ಪೆಗಳಿಗೆ ಪನಿಕಪ್ಪೆ ಎಂದು ಹೆಸರು.(ನಿಮ್ಮೂರಿನಲ್ಲಿ ಬೇರೆ ಹೆಸರು ಇರಲೂಬಹುದು)
 ಚಿತ್ರ ಕೃಪೆ:- ಸಿಂಚನಾ ಶ್ಯಾಂ
ಬಿಡದೆ ಸುರಿವ ಮಳೆಗೆ ಕಂದು ಬಣ್ಣದ ಕಪ್ಪೆಗಳು ಮನೆಯ ಮೂಲೆಯಲ್ಲಿ ಸೇರಿಕೊಂಡು ಸದ್ದು ಮಾಡಿದ್ದೂ ಇದೆ. ನನಗೆ ಕಪ್ಪೆಯನ್ನು ಬರೀ ಕೈಯಲ್ಲಿ ಹಿಡಿಯುವುದೆಂದರೆ ಒಂದು ರೀತಿಯ ಭಯ .ಬಟ್ಟೆ ತುಂಡು ಉಪಯೋಗಿಸಿ ಕಪ್ಪೆ ಹಿಡಿದು ಮನೆಯ ಹೋರಗಡೆ ಎಷ್ಟೋ ಸಲ ಬಿಸಾಡಿದ್ದೆನೆ. ಪ್ರತಿ ಸಲ ಮಳೆಗಾಲದಲ್ಲಿ  ಮನೆ ಪಕ್ಕದ ತೋಡಿನಲ್ಲಿ ಮೀನು ಹಿಡಿಯಲು (ಉಬೇರ್ ) ಹೋಗುತ್ತಿದ್ದೆವು. ಆಗ ಕಪ್ಪೆಗಳ ಮೊಟ್ಟೆಗಳು ಗೊಂಚಿಲು ರೂಪದಲ್ಲಿ ನೋಡಲು ಸಿಗುತ್ತಿತ್ತು. ಕಪ್ಪೆ ಮರಿಗಳನ್ನು ನಮ್ಮ ಕಡೆ “ತೊಂದೆ” ಎಂದು ಕರೆಯುತ್ತಾರೆ. ಗ್ರಾಮೀಣ ಭಾಗವಾದ ನನ್ನೂರಿನಲ್ಲಿ ಗದ್ದೆ,ತೋಟದ ಪರಿಸರ ಆಗಿರುವುದರಿಂದ ದೊಡ್ಡ ಕಪ್ಪೆಗಳು ಹಸಿರು ಹುಲ್ಲಿನ ಎಡೆಯಲ್ಲಿ ಅವಿತುಕೊಂಡಿರುತ್ತದೆ. ನಾವು ಅದರ ಸಮೀಪ ತಲುಪುವುದು ಗೊತ್ತಾದಾಗ ಒಮ್ಮೆಲೆ ಬೇರೆ ಕಡೆ ಜಂಪ್ ಹೊಡೆಯುತ್ತದೆ.  ತೋಟದಲ್ಲಿರುವ ಕಪ್ಪೆಯನ್ನು ಹಿಡಿಯುವ ಸಾಹಸ ಮಾಡುವುದಿಲ್ಲ ಮತ್ತು ಅದು ಅಷ್ಟು ಸುಲಭವಾಗಿ ಸಿಗುವುದೂ ಇಲ್ಲ.  ಕಪ್ಪೆ ಹಿಡಿದಾಗ ಅದರ ಮೂತ್ರ ಕಣ್ಣಿಗೆ ತಾಗಿದರೆ ಕಣ್ಣು ಹೋಗುತ್ತದೆ ಎಂದು ನನ್ನ ಮನೆಯಲ್ಲಿ ಹೇಳುತ್ತಿದ್ದರು. ಕಪ್ಪೆಗಳ ಬಗ್ಗೆ ಒಂದು ರೀತಿಯ ಭಯ ಈಗಲೂ ಇದೆ . “ಕಪ್ಪೆನ್ ಕೆರ್ಂಡ ಅಪ್ಪೆನ್ ಕೆರಿಲೆಕ್ಕ” ಎಂದು ಅಜ್ಜಿ ಆಗಾಗ ಹೇಳುತ್ತಿದ್ದರು. ನಮ್ಮ ಮನೆಯ ಕೆರೆಯಲ್ಲಿ ಕಪ್ಪೆಗಳಿಗೆ ಪರ್ಮನೆಂಟ್ ಜಾಗ . ನೀರು ಕಡಿಮೆಯಾಗುತ್ತಾ ಬಂದರೂ ಕಪ್ಪೆಗಳು ಕೆರೆಗಳ  ಬದುಗಳಲ್ಲಿ ಕಣ್ಣು ಪಿಲಿ ಪಿಲಿ ಮಾಡುತ್ತಾ ಕುಳಿತ್ತಿರುತ್ತದೆ. ಬಹಳ ಬೇಸರವಾಗುವ ಸಂದರ್ಭ ಎಂದರೆ ಕಪ್ಪೆಯನ್ನು ಕೇರೆ ಹಾವು ಅಥವಾ ಒಳ್ಳೆ ಹಾವು ಹಿಡಿದಾಗ ಅದರ ಚೀರಾಟಕ್ಕೆ ಮನಸು ನಿಜವಾಗಿ ಕರಗುತ್ತದೆ.ನಾನು ತಮ್ಮ ಅಕ್ಕ ಸೇರಿ ಹೆಚ್ಚಾಗಿ ಒಂದು ಉದ್ದನೆಯ ಕೋಲನ್ನು ಕೆರೆಯ ಬದಿಯಲ್ಲಿ ಮುಂಚಿತವಾಗಿ ರಡಿ ಮಾಡಿ ಇಡುತ್ತಿದ್ದೆವು. ಹಾವು ಕಪ್ಪೆಯನ್ನು ಹಿಡಿದಾಗ ಚೀರಾಟ ಕೇಳಿ ಹಾವಿನ ಬಾಯಿಗೆ ಕೋಲು ಹಾಕಿ ಎಷ್ಟೋ ಸಲ ಬಿಡಿಸಿದ್ದು ಉಂಟು. ಕಪ್ಪೆ ಹಾವಿನ ಅಹಾರವೆಂದು ಗೊತ್ತಿದ್ದರೂ  ಕಪ್ಪೆಯನ್ನು ರಕ್ಷಣೆ ಮಾಡುವುದೆ ನಮ್ಮ ಉದ್ದೇಶವಾಗಿತ್ತು ಹೊರತು ಹಾವಿನ ಆಹಾರವನ್ನು ತಪ್ಪಿಸಲಿಕ್ಕೆ ಅಲ್ಲ! 

ಈ ಮಳೆಗಾಲದಲ್ಲಂತೂ ಅನೇಕ ಗಾತ್ರ ಆಕಾರಗಳ ಕಪ್ಪೆಗಳು  ದಾರಿಯಲ್ಲಿ ಕಾಣ ಸಿಗುತ್ತವೆ.  ಎಷ್ಟೋ ಕಪ್ಪೆಗಳು ವಾಹನಗಳಿಗೆ ಸಿಲುಕಿ ಸತ್ತು ಕೊಳೆಯುತ್ತಾ ಕೆಟ್ಟ ವಾಸನೆ ಸೂಸುತ್ತಾ ಬಿದ್ದಿರುತ್ತಿರುವುದು ಈಗ ಮಾಮೂಲಿಯಾಗಿದೆ. ಇನ್ನೊಂದು ಘಟನೆಯನ್ನು ನಾನು ಹೇಳಲೇ ಬೇಕು.ನಮ್ಮ ಕೆರೆಗೆ ಅಪರೂಪಕ್ಕೆ ಕೊಕ್ಕರೆ ಬರುತ್ತಿತ್ತು.ಅದನ್ನು ಹಿಡಿಯಲು ಪಕ್ಕದ ಮನೆಯ ಪರಿಚಯಸ್ಥರೋರ್ವರು ಗಾಳಕ್ಕೆ ಕಪ್ಪೆ ಸಿಕ್ಕಿಸಿ ನೇತಾಡಿಸಿದ್ದರು.ನಾವೆಲ್ಲ ಕಾತುರದಿಂದ ಕೊಕ್ಕರೆ ಬರುವುದಕ್ಕಾಗಿ ಕಾಯುತ್ತಿದ್ದೆವು.ಕೊಕ್ಕರೆಯ ಬದಲು ಕೇರೆ ಹಾವೊಂದು ಬಂದು ನುಂಗಿ ಹುಲ್ಲಿನ ನಡುವೆ ಹೊರಳಾಟ ಮಾಡಿತು.ನಾವೆಲ್ಲ ಅಲ್ಲಿಂದ ಓಡಿಹೋವೆವು ಕೊನೆಗೆ ಗಾಳ ಇಟ್ಟ ಪರಿಚಯಸ್ಥರು ಕೇರೆಯನ್ನು ಹಿಡಿದು ಅದರ ಬಾಯಿಂದ ಗಾಳ ತೆಗೆಯಲು ಸಾಹಸವನ್ನೇ ಮಾಡಿದರು.ಗಮನಿಸ ಬೇಕಾದ ಸಂಗತಿ ಎಂದರೆ ಕಪ್ಪೆಗಳು ಇರುವುದರಿಂದಲೇ ಹಳ್ಳಿಯಲ್ಲಿ ಮಾಡುವ ಕೃಷಿಗೆ ಬಾಧಿಸುವ ಕೆಲವು ಕೀಟಗಳನ್ನು ನಿಯಂತ್ರಿಸುವ ಮಹತ್ವದ ಪಾತ್ರವನ್ನು ಮಾಡುತ್ತದೆ.ಮುಖ್ಯವಾಗಿ ತರಕಾರಿಗಳಿಗೆ ಬಾಧಿಸುವ ಕೆಲವು ಕೀಟಗಳನ್ನು ಕಪ್ಪೆಗಳು ಆಹಾರವಾಗಿ ತಿನ್ನುವುದರಿಂದ ಕೀಟಗಳ ಹತೋಟಿಯಾಗುತ್ತದೆ


ಒಂದು ಮಾಹಿತಿಯ ಪ್ರಕಾರ ಭಾರತದಲ್ಲಿ 340 ಪ್ರಭೇದದ ಕಪ್ಪೆಗಳಿವೆ. ಇವುಗಳಲ್ಲಿ 78 ಪ್ರಭೇದಗಳು ಅಪಾಯದಂಚಿನಲ್ಲಿವೆ. ಇವುಗಳಲ್ಲಿ 17 ಪ್ರಭೇದಗಳಂತೂ ತೀವ್ರ ಸಂಕಷ್ಟದಲ್ಲಿವೆ ಎಂದು ವರದಿ ಬೊಟ್ಟು ಮಾಡಿ ತೋರಿಸಿತ್ತು. ಉಳಿದಂತೆ 32 ಅಳಿವಿನಂಚಿನಲ್ಲಿದ್ದರೆ, 22 ಪ್ರಭೇದಗಳು ಅಳಿವಿನಂಚಿನ ಪ್ರಭೇದಗಳಾಗುವ ಹಾದಿಯಲ್ಲಿವೆ. ಜನರು ಮಾಡುತ್ತಿರುವ ಅವಾಂತರಗಳು ದಿನ ಹೋದಂತೆ ಭೂತಾಪಮಾನ ಹೆಚ್ಚಾಗುತ್ತಿದೆ. ಒಂದು ಕಡೆ ಕಪ್ಪೆಗಳ ಆವಾಸವೇ ಕಾಣೆಯಾಗುತ್ತಿದೆ. ಕಪ್ಪೆಗಳು ಇರುವುದರಿಂದಲೇ ಹಳ್ಳಿಯಲ್ಲಿ ಮಾಡುವ ಕೃಷಿಗೆ ಬಾಧಿಸುವ ಕೆಲವು ಕೀಟಗಳನ್ನು ನಿಯಂತ್ರಿಸುವ ಮಹತ್ವದ ಪಾತ್ರವನ್ನು ಮಾಡುತ್ತದೆ. ತಾಪಮಾನ ಮತ್ತು ನಗರೀಕರಣದ ಪರಿಣಾಮದಿಂದ ಕಪ್ಪೆಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ನದಿಗಳಿಗೆ ಹರಿಯ ಬಿಡುವ ನಗರ ತ್ಯಾಜ್ಯಗಳು ಅಥವಾ ಒಳಚರಂಡಿ ನೀರು ಕಪ್ಪೆಗಳನ್ನು ಕಾಡುತ್ತಿದೆ. ಆದರೆ ಪರಿಸರದ ಸಮತೋಲನದಲ್ಲಿ ಉಭಯವಾಸಿಗಳ ಪಾತ್ರ ಬಹಳ ದೊಡ್ಡದೊಂದು ಎನ್ನುವುದನ್ನು ಮರೆಯುವಂತಿಲ್ಲ.