Thursday, December 21, 2017

ನಿಜವಾಗಿಯೂ ಸಮ್ಮೇಳನಗಳಲ್ಲಿ ಗೋಷ್ಠಿ ನಡೆಸುವ ಉದ್ದೇಶವೇನು?

ಅನೇಕ ಕನ್ನಡ ತುಳು ಕಾರ್ಯಕ್ರಮಗಳಿಗೆ, ಸಮ್ಮೇಳನಗಳಿಗೆ, ಭಾಗವಹಿಸುವುದು ನನ್ನ ಹವ್ಯಾಸದ ಒಂದು ಭಾಗ.ಕಳೆದ ಆದಿತ್ಯವಾರ ಬೆಂಗಳೂರು ತುಳುಕೂಟ ವತಿಯಿಂದ ವಿಜಯನಗರದ ಅತ್ತಿಗುಪ್ಪೆ ಭಂಟರ ಸಂಘದ ಆವರಣದಲ್ಲಿ ತುಳುನಾಡ ಉತ್ಸವ 2017 ಹಾಗೂ ತುಳು ಸಾಹಿತ್ಯ ಸಮ್ಮೇಳನ ನಡೆದಿತ್ತು. ಸಮ್ಮೇಳನದಲ್ಲಿ ಅನೇಕ ಗೋಷ್ಠಿಗಳು ನಡೆದಿದ್ದು, ವಿದ್ವಾಂಸರ ಮೊದಲ ಗೋಷ್ಠಿ ಹೆಚ್ಚು ಮಾಹಿತಿ ಮತ್ತು ಚಿಂತನೆಯೊಂದಿಗೆ ಉಪಯುಕ್ತವಾಗಿತ್ತು.ಆ ಬಳಿಕ ಸಮಯದ ಕೊರತೆಯನ್ನು ಸರಿ ಹೊಂದಿಸಲು ಮಹಿಳಾ ಗೋಷ್ಠಿ ಮತ್ತು ಕವಿಗೋಷ್ಠಿಯನ್ನು ಒಂದೇ ವೇದಿಕೆಯಲ್ಲಿ ಮಾಡಿದರು. ಆದ್ರೆ ಆ ಬಳಿಕ ಮಹಿಳಾ ಗೋಷ್ಠಿ ನಡೆದಿದ್ದು ಅದರಲ್ಲಿ ಯುವ ವಾಗ್ಮಿ ಸಹನ ಕುಂದಾರ್ ಮಂಡಿಸಿದ ತುಳು ವಿಕಿಪೀಡಿಯಾ ಕುರಿತ ವಿಚಾರ ಶೂನ್ಯವಾಗಿತ್ತು.
ಭಾಷಣದ ಆರಂಭದಲ್ಲೇ ಈ ವಿಷಯ ನನಗೆ ಯಾಕೆ ಕೊಟ್ಟರೆಂದು ತಿಳಿಯುತ್ತಿಲ್ಲ ಎನ್ನುತ್ತಾ ಮಾತು ಆರಂಭಿಸಿದ ಅವರು ತುಳುನಾಡಿನ ದೈವರಾಧನೆ ಕುರಿತ ನುಡಿಗಟ್ಟುಗಳನ್ನು ನಿರಂತರ ಹೇಳಲು ಪ್ರಾರಂಭಿಸಿದರು. ಗೋಷ್ಠಿಯಲ್ಲಿ ನೀಡಿರುವ ವಿಷಯದ ಕುರಿತು ಮಾತು ಆರಂಭಿಸಿದ ಕಾರಣಕ್ಕಾಗಿ ಸಭಾಧ್ಯಕ್ಷತೆ ವಹಿಸಿದ್ದ ಡಾ. ಇಂದಿರಾ ಹೆಗ್ಗಡೆ ವಿಷಯದ ಕುರಿತು ಮಾತನಾಡುವಂತೆ ಸೂಚಿಸಿದ್ದರು. ವೇದಿಕೆಯಲ್ಲಿಯೇ ಸಹಾನ ಅವರು ಸಭಾಧ್ಯಕ್ಶರ ಮಾತು ಲೆಕ್ಕಿಸದೆ ಅಸಹನೆಯಿಂದ ಮತ್ತೆ ಬಂಧುಲೇ… ಎನ್ನುತ್ತಾ ದೈವದ ನುಡಿಗಟ್ಟುಗಳನ್ನು ಸ್ಪಟಿಸಿದರು.ಜೊತೆಗೆ ಫೇಸುಬುಕ್ ಸುದ್ದಿಗಳತ್ತ ವಿಷಯಾಂತರ ಮಾಡಿದರು. ಕಾರ್ಯಕ್ರಮ ಆಯೋಜಕರ ಗಡಿಬಿಡಿಯೊ ಅಥವಾ ವಿಷಯವನ್ನು ಒಪ್ಪಿಕೊಂಡವರ ಅನಿವಾರ್ಯತೆಯೋ ತಿಳಿಯದು, ರಾಜಧಾನಿಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿನ ಗೋಷ್ಠಿಯ ಉದ್ದೇಶ ಅರ್ಥವಾಗದೆ ಹೋಯ್ತು. ಕಾರ್ಯಕ್ರಮ ಆಯೋಜಕರು ಯಾರು ಯಾವ ವಿಷಯ ಮಾತನಾಡಿದ್ರೆ ಒಳ್ಳೆಯದು ಎಂಬುದರ ಬಗ್ಗೆ ಯೋಚಿಸಿದ್ದರೆ ಒಳ್ಳೆಯದಿತ್ತು.

ವಿಷಯದ ಕುರಿತ ಪೂರ್ಣ ಪ್ರಮಾಣದ ಅಂಶಗಳನ್ನು ಜನ ನಿರೀಕ್ಷೆ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರಬೇಕಾದ ಸಂಗತಿ. ವಿಷಯದ ಮೇಲೆ ಪ್ರಭುತ್ವ ಇಲ್ಲದ ಮತ್ತು ಅಸಮರ್ಪಕ ಮಾಹಿತಿ ಹೊಂದಿರುವವರಲ್ಲಿ ವಿಷಯ ಮಂಡನೆ ಮಾಡಿಸುವುದು ತಪ್ಪು ಎಂಬುದು ನನ್ನ ನಿಲುವು. ಹಾಗೆಂದು ಸಹಾನ ಅವರು ವಿವೇಚನೆ ಇಲ್ಲದೇ ಮಾತಾಡಿದರು ಎಂದಲ್ಲ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಪೂರ್ಣ ಮಾಹಿತಿ ಯಾರೂ ನೀಡಿದರೂ ಅದನ್ನು ಪ್ರಶ್ನಿಸಬಹುದು.ಮೊನ್ನೆಯ ಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಅವಕಾಶ ಇಲ್ಲದ ಕಾರಣಕ್ಕಾಗಿ ಇಲ್ಲಿ ನನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿರುವೆ. ಸಹಾನ ಅವರು ಪ್ರತಿಭಾವಂತರೂ ಮತ್ತು ಯುವ ವಾಗ್ಮಿಯಾಗಿ ಗುರುತಿಸಿಕೊಂಡಿರುವುದಕ್ಕೆ ನನಗೂ ಹೆಮ್ಮೆ ಇದೆ. ಆದರೆ ಸಭಾಧ್ಯಕ್ಷರ ಮಾತಿಗೆ ಕೋಪಗೊಂಡು ವೇದಿಕೆಯಲ್ಲಿಯೇ ಗೊಣಗಿದ್ದು ಯಾಕೋ ನನಗೆ ವಯಕ್ತಿಕವಾಗಿ ಸರಿ ಕಾಣಲಿಲ್ಲ. ವಿಷಯದ ಬಗ್ಗೆ ತಿಳಿದುಕೊಳ್ಳಲು ವೇದಿಕೆ ಮುಂಭಾಗದಲ್ಲಿ ಕೂತಿದ್ದ ನನಗೆ ಗೊಂದಲವಾಯಿತು ಮೇಧಾವಿಗಳು ಇರಲಿ, ಯುವ ವಿದ್ವಾಂಸರು,ಪ್ರತಿಭಾವಂತರೂ ಯಾರಾದರೂ ಇರಲಿ ವೇದಿಕೆಯಲ್ಲಿ ಶಿಷ್ಟಚಾರ ಪಾಲಿಸಿದರೆ ಕಾರ್ಯಕ್ರಮ ಚೊಕ್ಕವಾಗುತ್ತದೆ.ನೋಡುಗರ ಹೃದಯ ಗೆಲ್ಲುತ್ತದೆ. ವಿಕಿಪೀಡಿಯಾ ಕುರಿತು ನಿರಂತರ ಪ್ರಾಯೋಗಿಕ ಕೆಲಸಗಳನ್ನು ಮಾಡುವ ಪರಿಣತರಿಗೆ ವೇದಿಕೆ ನೀಡಿದ್ದರೆ ಒಳ್ಳೆಯದಿತ್ತು ಎಂಬುದು ನನ್ನ ಅಭಿಪ್ರಾಯ. ವಿಕೀಪಿಡಿಯಾದಲ್ಲಿ ನಾನು ಕೆಲವು ಬರಹಗಳನ್ನು ಬರೆದಿದ್ದೆನೆ ಮತ್ತು ಕೆಲವು ಕಾರ್ಯಗಾರಗಳಲ್ಲಿ ಭಾಗವಹಿಸಿರುವೆ. ನನ್ನ ಬಹರದಿಂದ ಕೆಲವು ಹಿರಿಯರಿಗೆ,ಕಿರಿಯರಿಗೆ ಬೇಸರವಾಗಬಹುದು ಆದರೂ ನನ್ನ ಅಭಿಪ್ರಾಯವನ್ನು ಇಲ್ಲಿ ತಿಳಿಸಿರುವೆ ಅಷ್ಟೆ.
ವಿ.ಕೆ ಕಡಬ