Saturday, September 22, 2018

ತರ್ಜುಮೆಯಲ್ಲಿ ಜೀವ ಕಳೆದುಕೊಳ್ಳುತ್ತಿರುವ ಕನ್ನಡ ಶಬ್ದಗಳು: ಇಲ್ಲಿ ಮೂತ್ರ ತೇರ್ಗಡೆ ಹೊಂದಿಲ್ಲ!


ಪ್ರತಿ ವರ್ಷವೂ ಸರಕಾರ ನವೆಂಬರ್ ಮೊದಲ ದಿನ ರಾಜೋತ್ಸವವನ್ನು ವಿಜ್ರಂಭಣೆಯಿಂದ  ಆಚರಣೆ  ಮಾಡುವುದಲ್ಲದೆ  ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತ ಬರುತ್ತಿದೆ.  ಆದರೆ ರಾಜ್ಯದ ಕೆಲ ಗಡಿಭಾಗದಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡಿದ್ದರೂ ಪ್ರಯೋಜನಕಾರಿಯಾಗದಿರುವುದು ಸಮಸ್ತ ಕನ್ನಡಿಗರಿಗೆ ಗೊತ್ತಿರುವ ಸಂಗತಿ. ಇಂತಹ ಜಾಗಗಳಲ್ಲಿ  ಅಲ್ಪಸ್ವಲ್ಪ ಕನ್ನಡ ಭಾಷೆ ಮಾತನಾಡುವವರು ನಮಗೆ ಕಾಣ ಸಿಗುತ್ತಾರೆ.  ಅಲ್ಲದೆ ಅಪರೂಪದ ನಾಮಫಲಕಗಳು ಕೂಡ ಕಾಣಸಿಗುವುದುಂಟು.  ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  ತಪ್ಪು ಸಂದೇಶ ನೀಡುವ ನಾಮಫಲಕಗಳು ಕಂಡು ಬರುತ್ತಿರುವುದು ನಮ್ಮ ದುರ್ದೈವಾಗಿದೆ.

ಮುಖ್ಯವಾಗಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಬದಿಯಲ್ಲಿ ಬರೆಸಲಾಗಿರುವ ನಾಮಫಲಕಗಳನ್ನು  ಜನಸಾಮಾನ್ಯರೂ ಗಮನಿಸುತ್ತಾರೆ.   ಈ ಇಲಾಖೆಯ ಬರವಣಿಗೆಯಲ್ಲಿ   ಅಲ್ಲಲ್ಲಿ ಕನ್ನಡ ಭಾಷೆಯನ್ನು ಅಪಭ್ರಂಶಗೊಳಿಸುವ ಉದಾಹರಣೆಗಳು ನಮಗೆ ಕಾಣ ಸಿಗುತ್ತಲೇ ಇವೆ  ಇದಕ್ಕೊಂದು ಸೇರ್ಪಡೆ ಈ ರಸ್ತೆ Do not pass urine ಎಂಬ ಶಬ್ದವನ್ನು ಇಲ್ಲಿ ಮೂತ್ರ ತೇರ್ಗಡೆ ಹೊಂದಿಲ್ಲ ಎಂದು  ಬಿ ಬಿ ಎಂ ಪಿ ಕನ್ನಡಕ್ಕೆ ತರ್ಜುಮೆ ಮಾಡಿರುವುದು. ಇದು ಒಂದು ಉದಾಹರಣೆಯಷ್ಟೆ.


ಬೆಂಗಳೂರಿನಲ್ಲಿ ಮಾತ್ರ ಅಲ್ಲ ಇತ್ತ ಮಂಗಳೂರಿನಿಂದ ಕಾಸರಗೋಡಿಗೆ ಸಾಗುವ ದಾರಿಯಲ್ಲಿ ತಲಪಾಡಿ ಕಳೆದರೆ ಕನ್ನಡವನ್ನು ಅಪ್ಪಚ್ಚಿ ಮಾಡಿರುವುದು ಕಾಣಬಹುದು.  ರಾಜಧಾನಿಯಲ್ಲಿ ಕನ್ನಡ ಕಗ್ಗೊಲೆ  ಹಲವು ರೀತಿಯಲ್ಲಿ ಆಗುತ್ತಿದೆ . ಪ್ರಮುಖವಾಗಿ ಕಂಡು ಬರುವುದು ವಿವಿಧ  ಬಡಾವಣೆಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಮತ್ತು  ಬಿಎಂಟಿಸಿ ಬಸ್‌ಗಳಿಗೆ ಅಳವಡಿಸಿರುವ ನಾಮ ಫಲಕಗಳಲ್ಲಿ.  ಈ ಮುದ್ರಾರಾಕ್ಷಸನ ಹಾವಳಿಗೆ ಹಲವು ತಪ್ಪುಗಳು ಇರುವುದರಿಂದ  ಈ ನಾಮಫಲಕಗಳು ಜನರಿಗೆ ತಪ್ಪು ಮಾಹಿತಿ ನೀಡುತ್ತವೆ .
ನಾನೊಮ್ಮೆ ಬೆಂಗಳೂರಿಗೆ ಹೋಗಿ  ಎಮ್.ಜಿ ರಸ್ತೆಯಲ್ಲಿ ಬಿ.ಎಂ ಟಿ ಸಿ ಬಸ್ಸ್ ನಲ್ಲಿ ಪ್ರಯಾಣಿಸುವಾಗ  ಚಿನ್ನ ಸ್ವಾಮಿ ಕ್ರೀಡಾಂಗಣದ ಹೆಸರನ್ನು ಕಂಡೆ. chinnaswamy stadium ಎಂದು ಇಂಗ್ಲಿಷ್ ನಲ್ಲಿ ಸ್ಪಷ್ಟವಿದ್ದರೂ ಕನ್ನಡದಲ್ಲಿ ಮಾತ್ರ ಅದು ಚಿನ್ನಸ್ವಾಮಿ ಸ್ತೇಡಿಯಂ ಆಗಿತ್ತು!

ಇಂತಹ ವಿಚಾರಗಳ ಬಗ್ಗೆ ಲೇಖನ ಬರೆಯುವುದರಿಂದ ಸರಿಪಡಿಸಲು ಸಾಧ್ಯವಾಗದು ಇದಕ್ಕೊಂದು  ದೊಡ್ಡ ಮಟ್ಟದ ಆಂದೋಲನವೇ ಬೇಕೆಂದು ಅನಿಸುತ್ತದೆ. ಸರ್ಕಾರ ,ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜೊತೆ  ಪ್ರಾಧ್ಯಾಪಕ ವರ್ಗ,ಕನ್ನಡ ಅಭಿಮಾನಿಗಳು ಕೈಜೋಡಿಸಿದರೆ  ಉತ್ತಮ ಆದೀತೆ?

Sunday, July 22, 2018

ಪ್ರವೀಣ ಹೆಸರಿನ ಬಹುತೇಕ ಸ್ನೇಹಿತರು ಜಾಣರು ,ಆದ್ರೆ ಈ ಪ್ರವೀಣ ಯಾಕೋ ದಡ್ಡನಾದ!


ನಾನು ಪ್ರಾಥಮಿಕ ವಿದ್ಯಾಭ್ಯಾಸ ಮಾಡುತ್ತಿರುವಾಗ ಮೊದಲ ಬೆಂಚಿನಲ್ಲಿ ಪ್ರವೀಣ ಹೆಸರಿನ ಸ್ನೇಹಿತನೊಬ್ಬ ಲೆಕ್ಕದಲ್ಲಿ ಜಾಣನಾಗಿದ್ದ, ಹೈಸ್ಕೂಲಿನಲ್ಲಿ ಕೊನೆಯ ಬೆಂಚಿನ ಮತ್ತೊಬ್ಬ ಪ್ರವೀಣ ಹೆಸರಿನ ಗೆಳೆಯ ಕಂಠ ಪಾಠದಲ್ಲಿ ಎತ್ತಿದ ಕೈ, ಇನ್ನು ಆಕಾಶವಾಣಿಯ ಉದ್ಘೋಷಕರಾಗಿರುವ ಪ್ರವೀಣ ಹೆಸರಿನ ಮತ್ತೋರ್ವ ಸ್ನೇಹಿತ ಮಾತು,ಕೃತಿ ಎರಡರಲ್ಲೂ ಸೈ ಎನಿಸಿಕೊಂಡವರು . ಎಲ್ಲಾ ನೆನಪುಗಳ ಮದ್ಯೆ ಮತ್ತೊಬ್ಬ ಪ್ರವೀಣ ಎಂಬ ಹೆಸರಿನ ಹುಡುಗ ದಡ್ಡನಾಗಿ ಸುದ್ದಿಯಾಗುತ್ತಿದ್ದಾನೆ!
ಈ ದಡ್ಡ ಯಾರೆಂಬ ಕುತೂಹಲ ನಿಮ್ಮಲ್ಲಿ ಇರಬಹುದು.    ಹೌದು, “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು'  ಕೊಡುಗೆ ರಾಮಣ್ಣ ರೈ ಎಂಬ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ  ದಡ್ಡ ಪ್ರವೀಣ ಕ್ಲಿಕ್ ಆಗಿದ್ದಾನೆ. ಈ ಹಾಡು ನೋಡಿ...

ಕನ್ನಡ ಚಿತ್ರರಂಗದ ಪ್ರಸಿದ್ಧ ಯುವ ನಿರ್ದೇಶಕ ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಚಿತ್ರೀಕರಣಗೊಳ್ಳಲಿರುವ ಸಿನೆಮಾ   ಗಡಿನಾಡಿನ ಕನ್ನಡ ಸಮಸ್ಯೆಯನ್ನು ಕೇಂದ್ರೀಕರಿಸಿಕೊಂಡು ಪೂರ್ಣವಾಗಿ ಕಾಸರಗೋಡಿನಲ್ಲಿ ಚಿತ್ರೀಕರಣಗೊಂಡ  ಮೊದಲ ಸಿನಿಮಾ ಇದಾಗಿದೆ .ಕಾಸರಗೋಡಿನ ಕನ್ನಡ ಭಾಷೆ, ಕಲೆ, ಸಂಸ್ಕೃತಿಯನ್ನು ವಿಶ್ವದಲ್ಲೇ ಹಬ್ಬಿಸುವುದಲ್ಲದೆ  ಕಾಸರಗೋಡಿನ ಕನ್ನಡವನ್ನು ಉಪಯೋಗಿಸಿರುವುದು ಕಳೆದ ಬಾರಿ ರಿಲೀಸ್ ಆಗಿರುವ ಹಾಡಿನಲ್ಲೇ ಗೊತ್ತಾಗುತ್ತದೆ.

ದಡ್ಡ ದಡ್ಡ ಹಾಡನ್ನು  ತ್ರಿಲೋಕ್ ವಿಕ್ರಮ್ ಪ್ರಾಸಬದ್ದವಾಗಿ   ಬರೆದಿದ್ದಾರೆ. ಹಕ್ಕಿ ಮುಟ್ಟದ ಕಾಳು ಹೊಡೆದ ಟೆನ್ನಿಸ್ ಬಾಲು..  ಎಂದು ಮುಂದುವರೆಸಿ ಹಾಡು ಬಾ ಕೊಗೀಲೆ ವೈ ಆರ್ ಯು ಸೈಲೆಂಟ್... ಅಂತ ವಿವರಿಸುತ್ತಾರೆ. ಇವೆಲ್ಲವನ್ನೂ      ವಾಸುಕಿ ವೈಭವ್ ಸಂಗೀತ ನೀಡಿ  ಧ್ವನಿಯನ್ನೂ ಸೇರಿಸಿ ಎಲ್ಲಾ ವಯೋಮಾನದವರೂ ಕೇಳುವ ಹಾಗೆ ಮಾಡಿದ್ದಾರೆ. ನಮ್ಮ ಬಾಲ್ಯದ ದಿನಗಳು, ಹದಿಹರೆಯದ ಹಂತಗಳು, ಶಾಲಾ ಜೀವನದ ಆನಂದದಾಯಕ ಸಂಗತಿಗಳು,   ಮತ್ತೆ ನಮ್ಮನ್ನು ಹಾಡು ಪ್ರಾಥಮಿಕ ಶಾಲೆಯತ್ತ ಕರೆದೊಯ್ಯುವ ಪ್ರಯತ್ನ ಮಾಡಿದಂತಿದೆ ಈತ ದಡ್ಡ ಆಗಿರುವುದಕ್ಕೆ ನನಗೇನೂ  ಬೇಸರವಿಲ್ಲ ಆತನ ಬಗ್ಗೆ ಹೆಮ್ಮೆ ಅನಿಸುತ್ತದೆ!
ರಿಷಬ್ ಶೆಟ್ಟಿಯವರು ಪ್ರವೀಣನನ್ನು ದಡ್ಡ ಮಾಡಿದ್ದು ಒಳ್ಳೆಯದೇ ಆಯಿತು. ವಿನೂತನ ಶೈಲಿಯಲ್ಲಿ ಸಿನೆಮಾ ಮಾಡುತ್ತಿರುವ ರಿಷಬ್ ಶೆಟ್ಟಿ ಬಳಗಕ್ಕೆ ಬಿಗ್  ಸೆಲ್ಯೂಟ್.


Friday, June 29, 2018

ಜುಲೈ 20 ರಂದು “ದಗಲ್ ಬಾಜಿಲು” ತೆರೆಗೆ

ಅನುಗ್ರಹ ಫಿಲಂಸ್ ಲಾಂಛನದಲ್ಲಿ ಕುಂಬ್ಳೆ ಸಂತೋಷ್ ಶೆಟ್ಟಿ ಮತ್ತು ಸ್ನೇಹಿತರು ನಿರ್ಮಿಸಿರುವ “ದಗಲ್ ಬಾಜಿಲು” ಸಿನಿಮಾ ಜುಲೈ 20 ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ.

ಮಕ್ಕಳ ಬಾಯಲ್ಲಿ ನಿತ್ಯವೂ ಸ್ವಚ್ಛತಾ ಗೀತೆ

ದಕ್ಷಿಣ ಕನ್ನದ ಜಿಲ್ಲಾ ಪಂಚಾಯತ್ ನ  ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್‌. ರವಿ ಅವರು ಜಿಲ್ಲೆಯಲ್ಲಿ ಸ್ವತ್ಛತೆಯ ಅನುಷ್ಠಾನಕ್ಕಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಲ್ಲಿ ಸ್ವತ್ಛತಾ ಜಾಗೃತಿಯೂ ಒಂದು.  ಎಂ.ಆರ್‌. ರವಿ ರವರು ಸ್ವತ್ಛತೆ ಕುರಿತ ಹಾಡನ್ನೂ ಬರೆದಿದ್ದಾರೆ.
ಮಕ್ಕಳಿಂದಲೇ ಸ್ವತ್ಛತಾ ಜಾಗೃತಿಗಾಗಿ ಕವನ ರಚಿಸಿ,  ಹಾಡಿಸುವ ಸೃಜನಾತ್ಮಕ ಮತ್ತು ರಚನಾತ್ಮಕ  ಚಟುವಟಿಕೆಯಾಗಿದೆ. ಇದೀಗ   ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದಾರೆ.  ಅಕ್ಟೋಬರ್ನಿಂದಲೇ  ಶಾಲೆಗಳಲ್ಲಿ ಸ್ವಚ್ಛತಾ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ.  

.  
ಶಿಕ್ಷಣ ಇಲಾಖೆ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಯೋಗದೊಂದಿಗೆ ವೇಳಾಪಟ್ಟಿ ತಯಾರಿಸಿ ಶಾಲೆಗಳಿಗೆ ನೀಡಲಾಗಿದ್ದುಅದರಂತೆ ಕಾರ್ಯಕ್ರಮ ಸಂಘಟಿಸಲಾಗುತ್ತಿದೆಪ್ರತೀ ಶನಿವಾರದ ಒಂದು ಅವಧಿಯಲ್ಲಿ ಶಾಲೆಗಳಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಗುತ್ತದೆವೇಳಾಪಟ್ಟಿಗೆ ಅನುಸಾರವಾಗಿ ಈಗಾಗಲೇ ತರಗತಿವಾರು ಸ್ವಚ್ಛತಾ ಸ್ಪರ್ಧೆಶಾಲಾ ಸ್ವಚ್ಛತಾ ನೀತಿ ರಚನೆಸ್ವತ್ಛತಾ ಚಿತ್ರಕಲಾ ಸ್ಪರ್ಧೆ,  ಹೆತ್ತವರಿಗೆ ಕಾರ್ಯಾಗಾರಮನೆಯಿಂದ ಪ್ಲಾಸ್ಟಿಕ್‌ ಸಂಗ್ರಹಿಸಿ ಪಂಚಾಯತ್ಗೆ ನೀಡುವ ಕಾರ್ಯಕ್ರಮಸ್ವಚ್ಛತೆಗೆ ಸಂಬಂಧಪಟ್ಟ ನಾಟಕ ಪ್ರದರ್ಶನಕೊಲಾಜ್‌ ತಯಾರಿಕೆ ಇತ್ಯಾದಿ ಚಾಲ್ತಿಯಲ್ಲಿದೆಮುಂದಿನ ದಿನಗಳಲ್ಲಿ ಪರಿಸರ ಹಾಡುಕಸದಿಂದ ರಸ ಕಾರ್ಯಾಗಾರಸ್ವಚ್ಛತಾ ಜಾಥಾಮಳೆ ನೀರು ಕೊಯ್ಲುಸ್ವಚ್ಛತೆಯ ಬಗ್ಗೆ ಕವನ ರಚನೆಪ್ರಬಂಧ ಸ್ಪರ್ಧೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗ್ರಾಮದ ಸ್ವತ್ಛತೆ ಸಮೀಕ್ಷೆ ಹಾಗೂ ಗ್ರಾ.ಪಂ.ಗಳಲ್ಲಿ ಕಾರ್ಯಕ್ರಮಸೌಲಭ್ಯಗಳ ಬಗ್ಗೆ ತಿಳಿಯಲು ಪಂಚಾಯತ್ಗೆ ಭೇಟಿ ಇತ್ಯಾದಿ ನಡೆಯುತ್ತಿದೆ.

Thursday, June 21, 2018

ಮಳೆಗಾಲದ “ಉಬೇರ್ ಮೀನ್” ಬೇಟೆ: ಮುಗುಡು ಮೀನು ಕೈವಶ!

ಮುಂಗಾರು ಮಳೆ  ಚುರುಕುಗೊಂಡಾಗ   ಗ್ರಾಮೀಣ ಭಾಗದಲ್ಲಿ  ಮೀನು ಬೇಟೆ ಶುರುವಾಗುತ್ತದೆ. ಮಳೆ ಬಂದು ಬಿಟ್ಟಾಗ  ಗದ್ದೆ, ತೋಡುಗಳಲ್ಲಿ ಮೀನು ಹುಡುಕಿಕೊಂಡು ಹೋಗುತ್ತಾರೆ. ನಡುರಾತ್ರಿ ಅಥವಾ ಕೋಳಿ ಕೂಗುವ ಹೊತ್ತಲ್ಲಿಯೂ ಹೋಗುವುದುಂಟು.  ಹರಿಯುವ ನೀರಿನಲ್ಲಿ ಮೀನು ಹಿಡಿಯುವುದೆಂದರೆ  ರೋಮಾಂಚನಕಾರಿಯೂ ಹೌದು.  ಇನ್ನು ಕೆಂಪು ಮಿಶ್ರಿತ ನೀರು ಬಂದಲ್ಲಿ ಸಣ್ಣ ಹೊಳೆ ಅಥವಾ ತೋಡಿನಲ್ಲಿ ಬಲೆ ಹಿಡಿಯುತ್ತಾರೆ ಕೂಡ. 
ನದಿಭಾಗದಿಂದ ಮೀನುಗಳು ಬಯಲು ಪ್ರದೇಶಕ್ಕೆ ಹಿಂಡು ಹಿಂಡಾಗಿ ಬರುತ್ತವೆ.  ಇದೊಂದು ಗ್ರಾಮೀಣ ಪ್ರದೇಶದ ಜನರ ಹವ್ಯಾಸವಾಗಿದ್ದು,  ನಮ್ಮಲ್ಲಿ “ಉಬೇರ್ ಮೀನು ಪತ್ತುನ” ಎಂದು ಕರೆಯುತ್ತಾರೆ.



ಹಿಂದೆ ದೀಪದ ದೊಂದಿ, ತೆಂಗಿನ ಗರಿಯಿಂದ ಮಾಡಿದ ತೂಟೆ ಇವುಗಳನ್ನು ಬಳಸಿ ಮೀನು ಹಿಡಿಯಲು ರಾತ್ರಿ ಸಂಚರಿಸಿದರೆ, ಈಗ ಆಧುನಿಕವಾಗಿ ಈಗ ಹೆಚ್ಚು ಪ್ರಕಾಶಮಾನವಾದ ಬ್ಯಾಟರಿ ಚಾಲಿತ ಲೈಟ್ ಗಳನ್ನು ಬಳಸಿ ಮೀನುಬೇಟೆಗೆ ತೆರಳುತ್ತಾರೆ .ಈ  ಮೀನು ಬೇಟೆಯಲ್ಲಿ ನಾನು ಪರಿಣತಿ ಪಡೆಯದಿದ್ದರೂ ಒಡನಾಟವಿದೆ.ನಮ್ಮ ಮನೆ ಸಮೀಪವೆಲ್ಲ ಗದ್ದೆ, ತೋಡುಗಳಿವೆ.   ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ನನ್ನ ತಂದೆ  ಮೀನು ಹಾಕುವ ಚೀಲ ಹಿಡಿಯಲು ಕರೆದುಕೊಂಡು ಹೋದದ್ದು ನೆನಪಿಗೆ ಬರುತ್ತಿದೆ. ನನಗೆ ರಾತ್ರಿ ಕತ್ತಲೆಯಲ್ಲಿ ತೆರಲು ತುಂಬಾ ಭಯ ಪಡುತ್ತಿದ್ದೆ. ನನ್ನ ತಂದೆ ವೃತ್ತಿಯಲ್ಲಿ ಪರಿಣತ ಗಾರೆ ಕೆಲಸದವರಾದರೂ ಹವ್ಯಾಸವಾಗಿ ಮೀನು ಹಿಡಿಯುವ ಕೂರಿ, ಪೂಡಾಯಿ ಇವುಗಳನ್ನು ತಯಾರಿಸಿ ಮೀನು ಹಿಡಿಯಲು ಹೋಗುತ್ತಿದ್ದರು


ರಾತ್ರಿ ತುಂತುರು ಮಳೆಯಲ್ಲಿ ಮಿನುಗಳ ವಲಸೆ ಜಾಸ್ತಿ ಎಂಬುದು ಎಲ್ಲರಿಗೆ ಗೊತ್ತ್ರುವ ಸಂಗತಿ. ಮೊನ್ನೆ ನಾನು ನನ್ನ ಕುಟುಂಬದ  ಸ್ನೇಹಿತರು ಸೇರಿ  ರಾತ್ರಿ  ಮೀನು ಬೇಟೆಗಾಗಿ ಹೋದೆವು. ನಾನು ಬರೇ ಎರಡು ಮೀನು ಬೇಟೆಯಾಡಿದೆ.  , ಮುಳ್ಳುಬಾಳೆ, ಮುಗುಡು , ಕೀಜನ್, ಚೀರ್ಕಟೆ  , ಏಡಿ ಹೀಗೆ ವೈವಿಧ್ಯಮಯ ಜಾತಿಯ ಮೀನುಗಳು ಕಾಣಸಿಕ್ಕರೂ ಎರಡು ಮುಗುಡು ಹಿಡಿಯುವಲ್ಲಿ ಸಫಲನಾದೆ!
ನೀರಿನೊಳಗೆ ಮೀನಿನ ಸಂಚಾರ ಗೋಚರಿಸಿದ ಕೋಡಲೇ ಹರಿತವಾದ ಉದ್ದನೆಯ ಕತ್ತಿಯಲ್ಲಿ  ಕಡಿದೆ .ಹಲವು ಪ್ರಯತ್ನಗಳ ಬಳಿಕ  ಮೀನು ಕೈವಶವಾಯಿತು.

ಸಣ್ಣ ಪುಟ್ಟ ಮೀನುಗಳಿಂದ ಹಿಡಿದು ದೊಡ್ಡ ದೊಡ್ಡ ಗಾತ್ರದ ಮೀನುಗಳೂ ಸಿಗುವುದುಂಡು ಆದ್ರೆ ಅದಕ್ಕೆ ತಾಳ್ಮೆ ಮತ್ತು ಸಮಯ ಬೇಕು. ರಾತ್ರಿ ಮೀನು ಬೇಟೆಯ ಸಮಯದಲ್ಲಿ ಹಾವುಗಳೂ ಇರುವ ಸಾಧ್ಯತೆಯಿದ್ದು, ಎಚ್ಚರಿಕೆಯೂ ಅಗತ್ಯ.ಈ ಮಳೆಗಾಲದಲ್ಲಿ ಮೀನು ಬೇಟೆ ಒಂದು ಹೊಸ ಅನುಭವೇ ಸರಿ

Friday, June 15, 2018

ಮನೆ ಹತ್ತಿರದ ಸಾಹೇಬರೂ ಮತ್ತು ಮೊದಲು ಸವಿದ ಮಟನ್ ಬಿರಿಯಾನಿಯೂ!

"ನಮ್ಮ ಮನೆಯಲ್ಲಿಯೂ ತೊಂದರೆಗಳು ಆದಾಗ ಸಾಹೇಬರ ಮೂಲಕ ಕೋಡಿಂಬಾಳದ ಮಸೀದಿಗೆ ಹರಕೆ ರೂಪದಲ್ಲಿ ಚಿಲ್ಲರೆ ಹಣ ನೀಡುತ್ತಿದ್ದೆವು. ಸಾಹೇಬರೂ ಮತ್ತು ಅವರ ಕುಟುಂಬದವರು ನಮ್ಮ ಕುಟುಂಬದಲ್ಲಿ ಆಚರಿಸುತ್ತಿದ್ದ ಪತ್ತನಾಜೆಯ ಸಮಯದಲ್ಲಿ ಗುಳಿಗ ದೈವಕ್ಕೆ ಹಣ್ಣು ಕಾಯಿ ಮತ್ತು ಹರಕೆ ನೀಡುತ್ತಿದ್ದರು"-ವಿ.ಕೆ ಕಡಬ

ಇಂದು ನಾಡಿನೆಲ್ಲೆಡೆ   ಈದು ಉಲ್ ಪಿತರ್  ಹಬ್ಬವನ್ನು  ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸುತ್ತಿರುವುದು ಗೊತ್ತಿರುವ ವಿಚಾರ. ಈ  ಪೆರ್ನಾಲ್  ಹಬ್ಬ ಬಂದಾಗಲೆಲ್ಲ  ನನ್ನ ಮನೆ ಸಮೀಪದ  ಸಾಹೇಬರು  ನನಗೆ ಆಗಾಗ ನೆನಪಾಗುತ್ತಿದೆ.  
ನಮ್ಮ ಮನೆಯಿಂದ ಕೂಗಳತೆಯ ದೂರಲ್ಲಿದ್ದ(ಹೆಸರು ಸೂಚಿಸುವುದಿಲ್ಲ)  ಅವರ ಮನೆ ಸಮೀಪದಿಂದಲೇ ಶಾಲೆಗೆ ಹೋಗುತ್ತಿದ್ದೆವು. ನಾನಾಗ ಪ್ರಾಥಮಿಕ ಶಾಲೆಯಲ್ಲಿ ಎರಡನೆ ತರಗತಿಯೋ ಅಥವಾ ಮೂರನೆ ತರಗತಿಯೋ ತಿಳಿಯದು. ಅಂತು ಶಾಲೆಗೆ ಹೋಗುತ್ತಿರುವುದು ಚೆನ್ನಾಗಿ ನೆನಪಿದೆ.   ಸಾಹೇಬರ ಹೆಂಡತಿ ಮತ್ತು ನನ್ನ ದೊಡ್ಡಮ್ಮ ಸ್ನೇಹಿತರು. ನನ್ನ ದೊಡ್ಡಮ್ಮ ಮತ್ತು ಸಾಹೇಬರ ಹೆಂಡತಿ  ಚಿಮಿನಿ ದೀಪದ ಬೆಳಕಿನಲ್ಲಿ ಬೀಡಿಕಟ್ಟಿದವರು.ಸಾಹೇಬರು ಬೀಡಿಯನ್ನು ಬ್ರಾಂಚ್ ಗೆ ತಗೊಂಡು ಹೋಗುತ್ತಿದ್ದರು. ದಿನ ಬಳಕೆಯ ವಸ್ತುಗಳಾದ  ಸಕ್ಕರೆ, ಚಾಹ ಹುಡಿ, ಕೆಂಪು ಮೆಣಸು, ಉಪ್ಪು ಕೂಡ  ಒಂದು ಮನೆಯಿಂದ ಇನ್ನೊಂದು ಮನೆಗೆ ರವಾನೆಯಾಗುತ್ತಿದ್ದದನ್ನು ಆಗ  ಕಣ್ಣರೆ ಕಂಡಿದ್ದೇನೆ. ಸಾಹೇಬರ ಮನೆಯಲ್ಲಿ ಒಂದು ದಿನವೂ ಚಹಾ ತಪ್ಪಿದಲ್ಲ. ಸಾಯಂಕಾಲ ಸಾಹೇಬರ ಹೆಂಡತಿ ದೊಡ್ಡಮ್ಮನ ಮನೆಯಲ್ಲಿ ಅಥವಾ ದೊಡ್ಡಮ ಅವರ ಮನೆಯಲ್ಲಿ ಸಾಯಂಕಾಲದ ಚಹಾಕ್ಕೆ ಪಕ್ಕಾ ಹಾಜರ್!


ಒಮ್ಮೆ ಪೆರ್ನಾಲ್ ಹಬ್ಬ ದ ಸಮಯ ಸಾಹೇಬರ ಮನೆಗೆ ಮದ್ಯಾಹ್ನ ಊಟಕ್ಕೆ ಬರುವಂತೆ ದೊಡ್ಡಮ್ಮನಲ್ಲಿ ಹೇಳಿದ್ದರು. ಶಾಲೆಗೆ ಆ ದಿನ ರಜೆ ಇದ್ದಕಾರಣ ದೊಡ್ಡಮ್ಮ ನಮ್ಮನೂ ಕರೆದುಕೊಂಡು ಹೋದರು. ಮಟನ್  ಬಿರಿಯಾನಿ ಎಂದು ಹೇಳಿ ಎಲ್ಲರಿಗೂ ಕೊಟ್ಟರು. ನನಗೂ ತಟ್ಟೆಯಲ್ಲಿ ಬಡಿಸಿಕೊಟ್ಟಿದ್ದರು.  ಆ ಸಮಯದಲ್ಲಿ ಮಟನ್ ಎಂದರೆ ಏನೋ ಕಲ್ಪಿಸಿಕೊಂಡು ನನಗೆ ಬೇಡವೆಂದು ಹಠ ಹಿಡಿದಿದ್ದೆ. ಕೊನೆಗೆ ಸಾಹೇಬರು ಬಂದು ಅದು ಆಡಿನ ಮಾಂಸವೆಂದು ತಿಳಿ ಹೇಳಿ ನನ್ನ ಜೊತೆ ಊಟಕ್ಕೆ ಕುಳಿತರು. ಇಲ್ಲೇ ನಾನು ಮೊದಲ ಬಾರಿಗೆ ಮಟನ್ ಬಿರಿಯಾನಿ ಸವಿದದ್ದು!

ನಮ್ಮ ದೊಡ್ಡಮ್ಮ ಸೇರಿದಂತೆ ನಮ್ಮ ಮನೆಯಲ್ಲಿಯೂ ಆರೋಗ್ಯದಲ್ಲಿ   ತೊಂದರೆಗಳು ಆದಾಗ , ಕಷ್ಟ ಬಂದಾಗ  ಸಾಹೇಬರ ಮೂಲಕ ಕೋಡಿಂಬಾಳದ ಮಸೀದಿಗೆ ಹರಕೆ ರೂಪದಲ್ಲಿ ಚಿಲ್ಲರೆ ಹಣ ನೀಡುತ್ತಿದ್ದೆವು. ಸಾಹೇಬರೂ ಮತ್ತು ಅವರ ಕುಟುಂಬದವರು ನಮ್ಮ ಕುಟುಂಬದಲ್ಲಿ ಆಚರಿಸುತ್ತಿದ್ದ ಪತ್ತನಾಜೆಯ ಸಮಯದಲ್ಲಿ ಗುಳಿಗ ದೈವಕ್ಕೆ ಹಣ್ಣು ಕಾಯಿ ಮತ್ತು ಹರಕೆ ನೀಡುತ್ತಿದ್ದರು.  ಇದೊಂದು ಜಾತೀಮೀರಿದ ಸಂಬಂಧ. ಇನ್ನೂ ವ್ಯಾಖ್ಯಾನಿಸಬಹುದಾದರೆ ಮಾನವ ಪ್ರೀತಿ ಎಂಬುದಷ್ಟೆ ಹೇಳಬಲ್ಲೆ.  ಕಾಲ ಕ್ರಮೇಣ ಅವರು ಜಾಗ ಮಾರಿ ಇನ್ನೊಂದು ಊರಿಗೆ ಹೋಗಿದ್ದಾರೆ.  ಸಾಹೇಬರು ನಮ್ಮಿಂದ ದೂರವಾದರೂ ಅವರ ಪ್ರೀತಿ, ಮತ್ತು ಸೌಹಾರ್ದ ಬದಕು ಇಂದಿಗೂ ಜೀವಂತ. ಈಗಲೂ ಅವರ ಮಕ್ಕಳು ಸಿಕ್ಕಾಗೆಲ್ಲ ಪರಸ್ಪರ ಮಾತನಾಡುತ್ತೇವೆ. 
ನಮಸ್ಕಾರ-ವಿ.ಕೆ ಕಡಬ