Wednesday, February 13, 2019

ನಾವು ಸಮಯ ನುಂಗದ, ಗಂಟೆಗಟ್ಟಲೆ ಕೊರೆಯದ ನಿರೂಪಕರು: ಬಾನುಲಿಯ ಬಾನಾಡಿಗಳು!


ಸಾಮಾನ್ಯವಾಗಿಆಡಿಯೋಎಂಬ ಶಬ್ದ ಹೆಚ್ಚು  ಬಳಕೆಯಾಗುವುದು ಮತ್ತು ಕೇಳಿ ಬರುವುದು ರೇಡಿಯೋ ಮಾಧ್ಯಮದ ಕಾರ್ಯಕ್ಷೇತ್ರದಲ್ಲಿ ಮಾತ್ರ .ಆದರೆ  ಪ್ರಸ್ತುತ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ  ಆಡಿಯೋ ಸುದ್ದಿ ಜೋರಾಗಿ ಕೇಳಿ ಬರುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ನಡುವೆ ವಿಶ್ವ ರೇಡಿಯೋ ದಿನ ಬಂದದ್ದು ಗೊತ್ತೇ ಆಗಿಲ್ಲ ನೋಡಿ!

ಸಾಮಾನ್ಯವಾಗಿ ರೇಡಿಯೋ ನಿರೂಪಕರು ಯಾವುದಾದರು  ಸಾರ್ವಜನಿಕ ಕಾರ್ಯಕ್ರಮಕ್ಕೆ ಹೋದಾಗ ಹಲವು ಜನ ಕುತೂಹಲದಿಂದ ಗಮನಿಸುವುದುಂಟು. ಸ್ವಲ್ಪ ಕಡಿಮೆ ಮಾತನಾಡಿ  ಎನ್ನುವವರೂ ಇದ್ದಾರೆ. ಒಂದು ಸಂತೋಷವೆಂದರೆ ನಾನು ಗಮನಿಸಿದ ಹಾಗೆ  ರೇಡಿಯೋ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಷಣ ಮಾಡುವ ಅಥವಾ ಮಾತನಾಡುವ ಅವಕಾಶ ಸಿಕ್ಕಾಗ ಗಂಟೆಗಟ್ಟಲೆ ಕೊರೆಯುವುದಿಲ್ಲ, ಮತ್ತೊಬ್ಬರ ಸಮಯವನ್ನು ನುಂಗುವುದಿಲ್ಲ,  ವಿಷಯಾಂತರ ಮಾಡುವುದಿಲ್ಲ . ಇದಕ್ಕೆ ಒಂದು  ಕಾರಣವೂ ಇದೆ ಎನ್ನಬಹುದು. ಅದೇನೆಂದರೆ ನಾವು ನಮ್ಮ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿಷಯ ಬರೆಯುವಾಗ ಹೆಚ್ಚಾದಾರೆ ಕತ್ತರಿ ಪ್ರಯೋಗ ಮಾಡುತ್ತೇವೆ. ಕಡಿಮೆಯಾದರೆ ಪೂರಕ ವಿಷಯ ವಿವರಣೆಯೊಂದಿಗೆ ಸಮಯಕ್ಕೆ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ. ಹಾಗಾಗಿ ಮಾತಿನಲ್ಲಿಯೂ ಹಿಡಿತ ಸಾಧಿಸಲು ಪ್ರಯತ್ನಿಸುತ್ತೇವೆ.

 ನಮ್ಮ ಪ್ರತಿಯೊಂದು ಕಾರ್ಯಕ್ರಮಗಳಿಗೆ ನಿರ್ದಿಷ್ಟ  ಸಮಯದ ಮಿತಿ ಇರುವುದರಿಂದ ಅಷ್ಟೇ ಸಮಯದೊಳಗೆ ಕಾರ್ಯಕ್ರಮ ಮುಗಿಸಬೇಕಾಗುತ್ತದೆ . ಗಣ್ಯ ವ್ಯಕ್ತಿ ಇರಲಿ ,ಸಾಮಾನ್ಯ ವ್ಯಕ್ತಿ ಇರಲಿ  ನೇರ ಪ್ರಸಾರ ಅಥವಾ ಧ್ವನಿ ಮುದ್ರಿತ ಪ್ರಸಾರದಲ್ಲಿ ಹಲವು ಬಾರಿ ಮಾತುಗಳಿಗೆ ಕತ್ತರಿ ಪ್ರಯೋಗವನ್ನು ಮಾಡುವ ಮೂಲಕ ನಿಗದಿತ ಸಮಯದೊಳಗೆ ಕಾರ್ಯಕ್ರಮವನ್ನು ಬಿತ್ತರಿಸುತ್ತೆವೆ .




ಸಾಮಾಜಿಕ ಜಾಲತಾಣದಲ್ಲಿ ನಿರೂಪಕರಿಗೆ ಅಭಿಮಮಾನಿಗಳ ಬಳಗ!

 ರೇಡಿಯೋ ನಿರೂಪಕರೆಂದರೆ   ಒಂದು ಕಾಲಕ್ಕೆ ಧ್ವನಿಯಲ್ಲಿಯೇ ಪರಿಚಿತ ಹೊರತು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಿಲ್ಲ,ಜೊತೆಗೆ ಅಂತಹ ವ್ಯವಸ್ಥೆಗಳು ಸಕಾಲದಲ್ಲಿ ಇರಲಿಲ್ಲ. ಬದಲಾದ ಕಾಲಘಟ್ಟದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ರೇಡಿಯೋ ನಿರೂಪಕರು ಜನ ಸಾಮಾನ್ಯರಿಗೂ ಕಾಣಸಿಗುತ್ತಾರೆ.ಇಂದು ಫೇಸ್ ಬುಕ್ ನಲ್ಲಿ ಹಲವು ನಿರೂಪಕರು ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.

ಇಡೀ ದಿನಾ ರೇಡಿಯೋದಲ್ಲಿ ಮಾತನಾಡುತ್ತಿರಾ?!

ರೇಡಿಯೋ ಕ್ಷೇತ್ರದ ಪರಿಚಯ ಇರುವ ಮತ್ತು ಅದರ ಬಗ್ಗೆ ತಿಳಿದಿರುವ ಹಾಗೂ ರೇಡಿಯೋ ಕೇಳುವ ಹವ್ಯಾಸ ಬೆಳೆಸಿಕೊಂಡಿರುವ , ಸದಾ ಒಟನಾಟ ಇರುವ ಜನರಿಗೆ ಇದರ ಸ್ಥೂಲ ಪರಿಚಯ ಇರುತ್ತದೆ.ಹಾಗಾಗಿ ನಮ್ಮ ಕೆಲಸ ಏನು ಎಂಬುದು ತಿಳಿದಿರುತ್ತಾರೆ. ಆದರೆ ಬಹುತೇಕರು ರೇಡಿಯೋ ಒಳಗೆ ಕೆಲಸ ಏನಿದೆ ಎಂದು ಕೇಳಿದರೆ, ಇನ್ನು ಕೆಲವರು ಇಡೀ ದಿನಾ ಮಾತನಾಡುತ್ತಿರಾ?  ಎಂದು ಕೇಳುವವರಿದ್ದಾರೆ.  ಮತ್ತೆ ಕೆಲವರು ರೇಡಿಯೋ ಕೇಳುವವರು ಈಗ ಇದ್ದಾರಾ? ಎಂದು ಪ್ರಶ್ನಿಸಿದರೆ ಮತ್ತೆ ಕೆಲವರು ಏನೆಲ್ಲ ಮಾತನಾಡುತ್ತಿರಾ ಎಂದು ಕೇಳುತ್ತಾರೆ. ಆದರೆ  ನಾವು ಪುಸ್ತಕಗಳನ್ನು ಓದುತ್ತೇವೆ, ಭಾಷಣಗಳನ್ನು ಕೇಳುತ್ತೇವೆ , ಕಾರ್ಯಕ್ರಮಕ್ಕೆ ತಯಾರಿ ಮಾಡುತ್ತೇವೆ, ನಮ್ಮದೇ ಕಾರ್ಯಕ್ರಮವನ್ನು ನಾವೇ ಕೇಳುತ್ತೇವೆ , ರೇಡಿಯೋ ನಿಲಯದ ಒಟ್ಟು ಕಾರ್ಯಕ್ರಮದ ರೂಪುರೇಷೆಯೊಳಗಿನ ಕೆಲಸಲ್ಲಿ ಭಾಗಿಯಾಗಿರುತ್ತೇವೆ ಎಂಬುದು ಹಲವರಿಗೆ ಗೊತ್ತೇ ಇಲ್ಲವೆಂದು ಅನಿಸುತ್ತದೆ.

ಅಪರಿಚಿತ ಕೇಳುಗರ ಜೊತೆ ಜಗಳ!
ಆಕಾಶವಾಣಿ ನನ್ನ ರೇಡಿಯೋ ಜೀವನದ ಮೊದಲ ಪಾಠ ಶಾಲೆ. ಬಳಿಕ ನಾನು ಮಂಗಳೂರಿನ  ರೇಡಿಯೋ ಸಾರಂಗ್ ನಲ್ಲಿ ಸುಮಾರು ಐದು ವರ್ಷ ಕೆಲಸ ಮಾಡಿಡಿದ್ದೆ. ಅಲ್ಲಿ  ತುಳು ಚಾವಡಿ,ಜನದನಿ, ಒಲವಿನಹಾಡು ಇತ್ಯಾದಿ ಜನ ಮೆಚ್ಚುಗೆಯ ಕಾರ್ಯಕಮ ನಡೆಸಿಕೊಟ್ಟಿದ್ದೆ. ಬಹುತೇಕ  ಕೆಳುಗರು ಸಾವಧಾನದಿಂದ ಆಲಿಸಿದರೆ, ಇನ್ನು ಕೆಲ ಕೇಳುಗರು ಕಿರಿಕ್ ಪಾರ್ಟಿಯಾಗಿದ್ದರು! ಲೈನ್ ಸಿಗದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದರೆ ಇನ್ನು ಕೆಲವರು ನಮ್ಮ ಕರೆ ಮಾತ್ರ ಸ್ವೀಕರಿಸುವುದಿಲ್ಲ ಎಂಬ ವಾದವನ್ನು ಮಾಡಿದ್ದರು.. ಮಂಗಳೂರು ಸಮೀಪದ ಯುವತಿಯೊಬ್ಬರು  ಸುಮಾರು ಎರಡು ವರ್ಷದಷ್ಟು ನನ್ನ ನೇರ ಪ್ರಸಾರ ಕಾರ್ಯಕ್ರಗಳಿಗೆ ಅಡಚಣೆ ಮಾಡಿದ್ದು ಮರೆಯಲು ಅಸಾಧ್ಯ. ಅಪರಿಚಿತ ಕೇಳುಗರು ನಮ್ಮ ಮೇಲೆಯೇ ಸವಾರಿ ಮಾಡಿದಾಗ ನಾನು ಕೋಪಗೊಂಡದ್ದು ಮಾತ್ರವಲ್ಲದೆ ಜಗಳವೂ ಮಾಡಿದ್ದು ಇದೆ!

ಸದ್ಯ ಉಜಿರೆಯಲ್ಲಿ ಮತ್ತೆ ರೇಡಿಯೋ ಜೀವನ ಮುಂದುವರಿಸಿದ್ದು, ಎಸ್.ಡಿ. ಎಂ  ಸಂಸ್ಥೆಯ ಅಧೀನದಲಿರುವ ರೇಡಿಯೋ ನಿನಾದ90.4 FM  ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.   ನಾವು ರೇಡಿಯೋ ನಿರೂಪಕರು. ಸಮಯ ನುಂಗದ, ಗಂಟೆಗಟ್ಟಲೆ  ಕೊರೆಯದ, ಬಾನುಲಿಯ ಬಾನಾಡಿಗಳು!  –ವಿ.ಕೆ ಕಡಬ






No comments:

Post a Comment