Showing posts with label ನೆನಪುಗಳು. Show all posts
Showing posts with label ನೆನಪುಗಳು. Show all posts

Friday, June 15, 2018

ಮನೆ ಹತ್ತಿರದ ಸಾಹೇಬರೂ ಮತ್ತು ಮೊದಲು ಸವಿದ ಮಟನ್ ಬಿರಿಯಾನಿಯೂ!

"ನಮ್ಮ ಮನೆಯಲ್ಲಿಯೂ ತೊಂದರೆಗಳು ಆದಾಗ ಸಾಹೇಬರ ಮೂಲಕ ಕೋಡಿಂಬಾಳದ ಮಸೀದಿಗೆ ಹರಕೆ ರೂಪದಲ್ಲಿ ಚಿಲ್ಲರೆ ಹಣ ನೀಡುತ್ತಿದ್ದೆವು. ಸಾಹೇಬರೂ ಮತ್ತು ಅವರ ಕುಟುಂಬದವರು ನಮ್ಮ ಕುಟುಂಬದಲ್ಲಿ ಆಚರಿಸುತ್ತಿದ್ದ ಪತ್ತನಾಜೆಯ ಸಮಯದಲ್ಲಿ ಗುಳಿಗ ದೈವಕ್ಕೆ ಹಣ್ಣು ಕಾಯಿ ಮತ್ತು ಹರಕೆ ನೀಡುತ್ತಿದ್ದರು"-ವಿ.ಕೆ ಕಡಬ

ಇಂದು ನಾಡಿನೆಲ್ಲೆಡೆ   ಈದು ಉಲ್ ಪಿತರ್  ಹಬ್ಬವನ್ನು  ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸುತ್ತಿರುವುದು ಗೊತ್ತಿರುವ ವಿಚಾರ. ಈ  ಪೆರ್ನಾಲ್  ಹಬ್ಬ ಬಂದಾಗಲೆಲ್ಲ  ನನ್ನ ಮನೆ ಸಮೀಪದ  ಸಾಹೇಬರು  ನನಗೆ ಆಗಾಗ ನೆನಪಾಗುತ್ತಿದೆ.  
ನಮ್ಮ ಮನೆಯಿಂದ ಕೂಗಳತೆಯ ದೂರಲ್ಲಿದ್ದ(ಹೆಸರು ಸೂಚಿಸುವುದಿಲ್ಲ)  ಅವರ ಮನೆ ಸಮೀಪದಿಂದಲೇ ಶಾಲೆಗೆ ಹೋಗುತ್ತಿದ್ದೆವು. ನಾನಾಗ ಪ್ರಾಥಮಿಕ ಶಾಲೆಯಲ್ಲಿ ಎರಡನೆ ತರಗತಿಯೋ ಅಥವಾ ಮೂರನೆ ತರಗತಿಯೋ ತಿಳಿಯದು. ಅಂತು ಶಾಲೆಗೆ ಹೋಗುತ್ತಿರುವುದು ಚೆನ್ನಾಗಿ ನೆನಪಿದೆ.   ಸಾಹೇಬರ ಹೆಂಡತಿ ಮತ್ತು ನನ್ನ ದೊಡ್ಡಮ್ಮ ಸ್ನೇಹಿತರು. ನನ್ನ ದೊಡ್ಡಮ್ಮ ಮತ್ತು ಸಾಹೇಬರ ಹೆಂಡತಿ  ಚಿಮಿನಿ ದೀಪದ ಬೆಳಕಿನಲ್ಲಿ ಬೀಡಿಕಟ್ಟಿದವರು.ಸಾಹೇಬರು ಬೀಡಿಯನ್ನು ಬ್ರಾಂಚ್ ಗೆ ತಗೊಂಡು ಹೋಗುತ್ತಿದ್ದರು. ದಿನ ಬಳಕೆಯ ವಸ್ತುಗಳಾದ  ಸಕ್ಕರೆ, ಚಾಹ ಹುಡಿ, ಕೆಂಪು ಮೆಣಸು, ಉಪ್ಪು ಕೂಡ  ಒಂದು ಮನೆಯಿಂದ ಇನ್ನೊಂದು ಮನೆಗೆ ರವಾನೆಯಾಗುತ್ತಿದ್ದದನ್ನು ಆಗ  ಕಣ್ಣರೆ ಕಂಡಿದ್ದೇನೆ. ಸಾಹೇಬರ ಮನೆಯಲ್ಲಿ ಒಂದು ದಿನವೂ ಚಹಾ ತಪ್ಪಿದಲ್ಲ. ಸಾಯಂಕಾಲ ಸಾಹೇಬರ ಹೆಂಡತಿ ದೊಡ್ಡಮ್ಮನ ಮನೆಯಲ್ಲಿ ಅಥವಾ ದೊಡ್ಡಮ ಅವರ ಮನೆಯಲ್ಲಿ ಸಾಯಂಕಾಲದ ಚಹಾಕ್ಕೆ ಪಕ್ಕಾ ಹಾಜರ್!


ಒಮ್ಮೆ ಪೆರ್ನಾಲ್ ಹಬ್ಬ ದ ಸಮಯ ಸಾಹೇಬರ ಮನೆಗೆ ಮದ್ಯಾಹ್ನ ಊಟಕ್ಕೆ ಬರುವಂತೆ ದೊಡ್ಡಮ್ಮನಲ್ಲಿ ಹೇಳಿದ್ದರು. ಶಾಲೆಗೆ ಆ ದಿನ ರಜೆ ಇದ್ದಕಾರಣ ದೊಡ್ಡಮ್ಮ ನಮ್ಮನೂ ಕರೆದುಕೊಂಡು ಹೋದರು. ಮಟನ್  ಬಿರಿಯಾನಿ ಎಂದು ಹೇಳಿ ಎಲ್ಲರಿಗೂ ಕೊಟ್ಟರು. ನನಗೂ ತಟ್ಟೆಯಲ್ಲಿ ಬಡಿಸಿಕೊಟ್ಟಿದ್ದರು.  ಆ ಸಮಯದಲ್ಲಿ ಮಟನ್ ಎಂದರೆ ಏನೋ ಕಲ್ಪಿಸಿಕೊಂಡು ನನಗೆ ಬೇಡವೆಂದು ಹಠ ಹಿಡಿದಿದ್ದೆ. ಕೊನೆಗೆ ಸಾಹೇಬರು ಬಂದು ಅದು ಆಡಿನ ಮಾಂಸವೆಂದು ತಿಳಿ ಹೇಳಿ ನನ್ನ ಜೊತೆ ಊಟಕ್ಕೆ ಕುಳಿತರು. ಇಲ್ಲೇ ನಾನು ಮೊದಲ ಬಾರಿಗೆ ಮಟನ್ ಬಿರಿಯಾನಿ ಸವಿದದ್ದು!

ನಮ್ಮ ದೊಡ್ಡಮ್ಮ ಸೇರಿದಂತೆ ನಮ್ಮ ಮನೆಯಲ್ಲಿಯೂ ಆರೋಗ್ಯದಲ್ಲಿ   ತೊಂದರೆಗಳು ಆದಾಗ , ಕಷ್ಟ ಬಂದಾಗ  ಸಾಹೇಬರ ಮೂಲಕ ಕೋಡಿಂಬಾಳದ ಮಸೀದಿಗೆ ಹರಕೆ ರೂಪದಲ್ಲಿ ಚಿಲ್ಲರೆ ಹಣ ನೀಡುತ್ತಿದ್ದೆವು. ಸಾಹೇಬರೂ ಮತ್ತು ಅವರ ಕುಟುಂಬದವರು ನಮ್ಮ ಕುಟುಂಬದಲ್ಲಿ ಆಚರಿಸುತ್ತಿದ್ದ ಪತ್ತನಾಜೆಯ ಸಮಯದಲ್ಲಿ ಗುಳಿಗ ದೈವಕ್ಕೆ ಹಣ್ಣು ಕಾಯಿ ಮತ್ತು ಹರಕೆ ನೀಡುತ್ತಿದ್ದರು.  ಇದೊಂದು ಜಾತೀಮೀರಿದ ಸಂಬಂಧ. ಇನ್ನೂ ವ್ಯಾಖ್ಯಾನಿಸಬಹುದಾದರೆ ಮಾನವ ಪ್ರೀತಿ ಎಂಬುದಷ್ಟೆ ಹೇಳಬಲ್ಲೆ.  ಕಾಲ ಕ್ರಮೇಣ ಅವರು ಜಾಗ ಮಾರಿ ಇನ್ನೊಂದು ಊರಿಗೆ ಹೋಗಿದ್ದಾರೆ.  ಸಾಹೇಬರು ನಮ್ಮಿಂದ ದೂರವಾದರೂ ಅವರ ಪ್ರೀತಿ, ಮತ್ತು ಸೌಹಾರ್ದ ಬದಕು ಇಂದಿಗೂ ಜೀವಂತ. ಈಗಲೂ ಅವರ ಮಕ್ಕಳು ಸಿಕ್ಕಾಗೆಲ್ಲ ಪರಸ್ಪರ ಮಾತನಾಡುತ್ತೇವೆ. 
ನಮಸ್ಕಾರ-ವಿ.ಕೆ ಕಡಬ



Friday, January 27, 2017

ಬೀಜ ಕುಟ್ಟುವ ಸ್ಪರ್ಧೆ ಮತ್ತು ಗೇರು ಬೀಜ ಮರದಲ್ಲಿ ಮರಕೋತಿ ಆಟ!

ಗೇರು ಹಣ್ಣು ತಿನ್ನುವುದಕ್ಕೂ  ಭಾಗ್ಯ ಬೇಕು .ತಿಂದವನೆ ಅದರ ರುಚಿಯನ್ನು ಬಲ್ಲ . ನಮ್ಮ ಮನೆಯ ಮೇಲಿನ ಗುಡ್ಡದಲ್ಲಿ ಗೇರು ಬೀಜದ ಮರ ಇತ್ತು . ಅಲ್ಲಿ ನಮ್ಮ ಸ್ನೇಹಿತರೆಲ್ಲ ಸೇರಿ ಮರಕೋತಿ ಆಟ  ಆಡುತ್ತಿದ್ದೆವು. ಅದು ಕೂಡ ಗೇರು ಹಣ್ಣು ಆಗುವ ಟೈಮ್ ನಲ್ಲಿ!  ಮರಕೋತಿಯ ಆಟ ನನಗಂತು ತುಸು ಕಷ್ಟವೇ ಆಗಿತ್ತು. ನಮ್ಮ ಆಟಗಳು  ಇಷ್ಟಕ್ಕೆ ಮಾತ್ರ ಸಿಮೀತವಾಗಿರಲಿಲ್ಲ ,ಬದಲಾಗಿ ಬೀಜ ಕುಟ್ಟುವ ಮೂಲಕ ನಮ್ಮ ಪೋಕೆಟ್  ಮನಿ  ಭರ್ತಿ ಮಾಡುತ್ತಿದ್ದೆವು. ಶಾಲಾ ದಿನಗಳಲ್ಲಿ  ನಮ್ಮ ಸಣ್ಣ ಪುಟ್ಟ ಖರ್ಚಿಗೆ  ಗೇರು ಬೀಜದ ಹಣ  ಸಾಕಾಗುತ್ತಿತ್ತು.ನಮ್ಮ ಮನೆಯಲ್ಲಿ ಅಡಿಕೆ ಹಾಳೆಯಿಂದ ಮಾಡಿದ ಮೂರು ಬ್ಯಾಗ್ ಗಳು ಇದ್ದವು ಅದರಲ್ಲಿ ಗೇರುಬೀಜಗಳನ್ನು ಸಂಗ್ರಹಿಸುತ್ತಿದ್ದೆವು.ಅಂದಹಾಗೆ ಅಡಿಕೆ ಹಾಳೆಯಿಂದ ತಯಾರಿಸಿದ ಬ್ಯಾಗಿಗೆ ಹೆಸರು ಮೂಡೆ!! ಇನ್ನು ತಿನ್ನುವ ಮೂಡೆ ನೆನಪಿಸಿಕೊಂಡು ಈ ಲೇಖನ ಓದುತ್ತಿದ್ದಿರಿ ಅಲ್ವಾ? ವ್ವಾವ್…! ನಮ್ಮ ಗುಡ್ಡದಲ್ಲಿ ಕೆಂಪು ,ಹಳದಿ ಬಣ್ಣದ ಗೇರು ಹಣ್ಣಿನ ಮರಗಳಿದ್ದವು  ರಾತ್ರಿ  ಇಡೀ ಬಾವಲಿಗಳ ಕಿರುಚಾಟ . ಕೆಲವೊಮ್ಮೆ ಬಾವಲಿಗಳನ್ನು ನೋಡುವುದಕ್ಕೆ೦ದೇ  ಲೈಟ್ ಹಿಡಿದುಕೊಂಡು ಗುಡ್ಡಕ್ಕೆ ಹೋಗುತ್ತಿದ್ದೆ .ಆಗ ನನ್ನ ಅಮ್ಮ ಗೂಬೆ ಇದೆ ಅದು ಕಣ್ಣಿಗೆ ತನ್ನ ಕೊಕ್ಕಿನಲ್ಲಿ ಕುಕ್ಕುತ್ತೆ ಎನ್ನುತ್ತಿದ್ದರು. ನಾನು ಅಕ್ಕ ಗುಡ್ಡದಲ್ಲಿ ನಿಂತುಕೊಂದು ಗೂಬೆಯ ಹಾಗೆ ಹುಂ…ಹೂಂ….ಅಂತ ಕೂಗುತ್ತಿದ್ದದ್ದು  ಈಗ ಬರೀ ನೆನಪು ಮಾತ್ರ

ಬಾವಲಿಗೆ ಹಗಲು ಕಣ್ಣು ಕಾಣುವುದಿಲ್ಲವಂತೆ!
ಬಾವಲಿಗೆ ಹಗಲು ಕಣ್ಣು ಕಾಣುವುದಿಲ್ಲ ರಾತ್ರಿ ಮಾತ್ರ ಕಣ್ಣು ಕಾಣುತ್ತೆ ಎಂದು ಅಜ್ಜಿ ಕತೆ ಹೇಳುತ್ತಿದ್ದರು.ನಮ್ಮ  ಮನೆಯ  ಕೆರೆಯ ಸುತ್ತ ಯಾರು ಹೋಗದಂತೆ  ನನ್ನ ತಂದೆ ಮುಳ್ಳಿನ ಗುಲಾಬಿ ಗಿಡ ನಟ್ಟಿದ್ದರು. ಒಮ್ಮೆ ಮನೆಯ ಕೆರೆಯ ಸಮೀಪ ಹಗಲು ಹೊತ್ತಿನಲ್ಲಿ ಬಾವಲಿ ಬಂದು ಮುಳ್ಳಿನಲ್ಲಿ ಸಿಲುಕಿಕೊಂಡಿತ್ತು. ಅದರ ಬೊಬ್ಬೆಗೆ ನಾವೆಲ್ಲ ಅಡುಗೆ ಕೋಣೆಯಲ್ಲಿ ಅವಿತುಕೊಂಡಿದ್ದೆವು. ಬಳಿಕ ಪಕ್ಕದ ಮನೆಯ ದೊಡ್ಡಮ್ಮ ಅದನ್ನು ಬಿಡಿಸಿದರು.ಅದರ ರೆಕ್ಕೆ ಯೂ ಸ್ವಲ್ಪ ಹರಿದಿತ್ತು. ಮೊದಲ ಬಾರಿ ನಾನು ಹತ್ತಿರದಿಂದ ಬಾವಲಿ  ನೋಡಿದ್ದು ಅದೇ ಮೊದಲು ನಾನು .ತಮ್ಮ, ಅಕ್ಕ ಶಾಲೆ ಬಿಟ್ಟು ಬಂದ ಕೂಡಲೇ ಕಾಯಿ ಬೀಜವನ್ನು ತುಂಡರಿಸಿ  ತಿನ್ನುತಿದ್ದೆವು ,ಏಷ್ಟೋ  ಸಲ ಬಾಯಿ ಸುಟ್ಟದ್ದು ಉಂಟು !  ಕೆಲವು ಸಲ ಕಾಡುಹಂದಿ ಬಂದು ಗೇರು ಬೀಜವನ್ನು ಜಗಿದು ಹಾಕುತಿತ್ತು .ಅದಕ್ಕೆ ನನ್ನ ತಂದೆ ಉರುಳು ಇಡುತ್ತಿದ್ದರು. ಅದು ನಮಗಿಂತಲೂ ಬುದ್ಡಿವಂತಿಕೆ  ತೋರಿಸಿ ,ಬೇರೆ ದಾರಿಯಲ್ಲಿ ಬಂದು ಅದಕ್ಕಿಂತಲೂ ಹೆಚ್ಚು ಗೇರು ಬೀಜ ತಿಂದು ಹೋಗುತಿತ್ತು !

ಸಣ್ಣ ಗಾತ್ರದ  ಕೆಂಪು ಬಣ್ಣದ ಗೇರು ಬೀಜದ ಹಣ್ಣುಗಳನ್ನು  ಹೆಚ್ಚು ನಾವೆಲ್ಲ ತಿನ್ನುತಿದ್ದೆವು . ನಮ್ಮ ಬ್ಯಾಗ್ ನಲ್ಲಿ ಪುಸ್ತಕದ ಜೊತೆಗೆ ಅರ್ಧ ಕೆ. ಜಿ ಯಷ್ಟು  ಬೀಜವು ಇರುತಿತ್ತುಹಳ್ಳಿ ಯಲ್ಲಿ ಜಾತ್ರೆ,ನೇಮೊತ್ಸವ ಹೆಚ್ಚಾಗಿ  ಇದ್ದೆ ಇರುತ್ತದೆ , ಜಾತ್ರೆಗಳಲ್ಲಿ ಐಸ್ ಕ್ಯಾಂಡಿ ,ಐಸ್ ಕ್ರೀಮ್ ,ಕಡ್ಲೆ  ಎಲ್ಲವನ್ನೂ ಗೇರು ಬೀಜ ಮಾರಿಯೇ ಹಣ ಸಂಪಾದಿಸಿದರಲ್ಲಿಯೇ ತಿನ್ನುತ್ತಿದ್ದೆವು .ಇನ್ನೂ  ಮಳೆಗಾಲದ ಸಮಯದಲ್ಲಿ ಬೆಂಕಿಯಲ್ಲಿ ಸುಟ್ಟು ತಿನ್ನುವ ಮಜವೇ ಬೇರೆ .ಒಮ್ಮೊಮ್ಮೆ ಬೆಂಕಿಗೆ ಹಾಕಿದ ಬೀಜ ಡಮ್…ಎಂದು ಮೈ ಮೇಲೆ ಬರುವೂದು ಇದೆ. ಮತ್ತೆ ಕಾಲಿಗೆ ಕಬ್ಬಿಣ ಅಥವಾ ಕಬ್ಬಿಣದ ಯಾವುದೇ ವಸ್ತು ತಾಗಿದರೂ ನನ್ನ ತಾಯಿ  ಗೇರು ಬೀಜದ ಸಿಪ್ಪೆಯನ್ನು ಬೆಂಕಿಗೆ ಇರಿಸಿ ಅದರಿಂದ ಬರುವ ಎಣ್ಣೆಯನ್ನು ಬಿಸಿ ಬಿಸಿಯಾಗಿ ಕಾಲಿಗೋ ,ಕೈಗೊ  ಮುಟ್ಟಿಸುತ್ತಿದ್ದರು .ಅದರಲ್ಲೂ  ಮದ್ದಿನ ಗುಣ ಇರುವುದನ್ನು ಕಾಣಬಹುದು .ಶಾಲಾ ದಿನಗಳಲ್ಲಿ ನಮಗೆ ಸಮರ್ಪಕವಾಗಿ ಗೇರು ಬೀಜ ಸಿಗದೇ ಹೋದ ಸಂದರ್ಭದಲ್ಲಿ ಪಕ್ಕದ ಮನೆಯವರ ಬೇಲಿ ಹಾರಿ ಹೋಗಿದ್ದು  ಈಗ ನೆನಪಾಗಿ ಉಳಿದಿದೆ.ಇಲ್ಲಿ ನನ್ನ ಅನುಭವನ್ನು ಮಾತ್ರ ಹಂಚಿಕೊಂಡಿದ್ದೆನೆ .ನೀವೂ ಕೂಡ ಓದಿ ನಿಮ್ಮ ಅನುಭವಗಳನ್ನು ಹಂಚಿ ಕೊಳ್ಳಿ .

Wednesday, December 07, 2016

ಆಡಿನ ಒಡನಾಟ ಕುಟ್ಟ- ಕುಟ್ಟಿ ಒಂದು ನೆನಪು

"ಆಡು ಮುಟ್ಟದ ಸೊಪ್ಪಿಲ್ಲ" ಎನ್ನುವ ಮಾತು ನೀವೆಲ್ಲರೂ ಕೇಳಿರಲೇ ಬೇಕು . ನಾನಾಗ 8ನೇ  ತರಗತಿ ಓದುತ್ತಿದ್ದೆ.ನಮ್ಮ ಮನೆಯಲ್ಲಿ ಆಗಎರಡು ಆಡುಗಲಿದ್ದವು .ಗಂಡು ಆಡಿನ ಹೆಸರು "ಕುಟ್ಟ" ಹೆಣ್ಣು ಆಡಿನ ಹೆಸರು "ಕುಟ್ಟಿ". ಹೀಗೆ ಪ್ರೀತಿಯಿಂದ ಅದನ್ನುಕುಟ್ಟ- ಕುಟ್ಟಿ ಎಂದು ಕರೆಯುತ್ತಿದ್ದೆವು . ಆಡುಗಳನ್ನು ನಾವೇನು ಕಟ್ಟಿ ಹಾಕುತಿರಲಿಲ್ಲ .ಅದರಷ್ಟಕೆ  ತಿಂದು ಬಂದು ಹೋಗುತ್ತಿದ್ದವು. ನಮ್ಮ ಪ್ರೀತಿಯ ಕುಟ್ಟ  ನಮ್ಮ ಮನೆಯ ತುದಿಗೆ(ಮನೆಯ ಕುಬಾಲ್) ಹೋಗಿ ಜಾರಿಕೊಂಡು ಬರುತಿತ್ತು . ಪಕ್ಕದಲ್ಲಿ ಹಂಚಿನ ಮಾಡು ಏರಲು ಎತ್ತರದ ಜಾಗವು ಇತ್ತು . ಕೊನೆಗೆ ಅದರ ಉಪದ್ರ ತಡೆಯಲಾರದೆ ತಂದೆ ಅದನ್ನು ಮಾರಿಬಿಟ್ಟರು .ಆಗೇನು ನಮಗೆ ಬೇಸರ ಆಗಲಿಲ್ಲ . ಮತ್ತೊಂದು ಕುಟ್ಟಿ  ಅದಕ್ಕೆ ದಿನಾ ಬಟಾಣಿ ಕಡ್ಲೆ ಬೇಕೆ ಬೇಕು . ಬಟಾಣಿ ರುಚಿ ಹಿಡಿಸಿದ್ದೆ ನಾನು !  ಶಾಲೆಯಿಂದ ನಡೆದು ಕೊಂಡು ಬರುವಾಗ  ಕಡ್ಲೆ ತಿನ್ನುತ್ತಾ ಬರುತ್ತಿದ್ದೆವು . ಉಳಿದ ಕಡ್ಲೆಯನ್ನು  ಪ್ರೀತಿಯ ಕುಟ್ಟಿಗೆ  ಕೊಡುತ್ತಿದ್ದೆ .

ಒಂದು ದಿನ ಮನೆಯಲ್ಲಿ ಯಾರು ಇರಲಿಲ್ಲ  ಅದು  ಶನಿವಾರ ಬೇರೆ .ತಾಯಿ ಆಗ ಬೇರೆ ಕಡೆ ಕೆಲಸ ಮಾಡುತ್ತಿದ್ದರು . ನಾವು ಶಾಲೆ ಬಿಟ್ಟು ಮನೆಗೆ ಬಂದು ಊಟದ ಗಡಿಬಿಡಿಯಲ್ಲಿ ಇದ್ದೆವು . ಕುಟ್ಟಿಯನ್ನು ಕರೆದರೆ ಸುದ್ದಿಯೇ ಇಲ್ಲ . ಸಲ್ಪ ಹೊತ್ತು ಆದಾಗ ಜೋರಾಗಿ  ಬೇ... ಬೇ... ಬೇ... ಬೇ...  ಎಂಬ ಕೂಗು ಕೇಳಿತು . ನಾವೆಲ್ಲಾ ಒಮ್ಮೆ ಅತ್ತಿತ್ತ ಓಡಿದೆವು . ಪೋದೆಯೊಂದರಿಂದ ರಕ್ತ ಸುರಿಸುಕೊಂಡು ಮನೆಯ ಅಂಗಳಕ್ಕೆ ಕುಟ್ಟಿ ಬಂತು. ಸಲ್ಪ ಹೊತ್ತಲ್ಲೇ ಎರಡು ನಾಯಿಗಳು ಕೂಡ ಬಂದವು . ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಕೊತ್ತಳಿಗೆ ಯಲ್ಲಿ ನಾಯಿಗೆ ಬಿಸಾಡಿದೆವು . ಅದು ನಮ್ಮ ಪಕ್ಕದ ಮನೆಯವರ ನಾಯಿ ನಾಯಿಯನ್ನು ಯಾವತ್ತು ಬಿಡಲ್ಲ  . ದಿನ ಮಾತ್ರ ಅದು ತಪ್ಪಿಸಿಕೊಂಡು ಬಂದಿತ್ತು . ನಮ್ಮ ಕುಟ್ಟಿಗೆ  ಕುತ್ತಿಗೆಗೆ ಗಾಯವಾಗಿತ್ತು. ನಮ್ಮ ಮನೆಯ ಜಗಲಿಯಲ್ಲಿ ಬಂದು ಅಡ್ಡ ಮಲಗಿದನ್ನು ನೋಡಿ ನಾವೆಲ್ಲಾ ಜೋರಾಗಿ ಬೊಬ್ಬೆ ಹೊಡೆದೆವು . ಹೇಗೊ ತಾಯಿ ಬಂದು ಮದ್ದು ನೀಡಿದರು . ಮತ್ತಿ ಕುಟ್ಟಿಯನ್ನು  ಕಟ್ಟಿಹಾಕಲು ಶುರು ಮಾಡಿದೆವು . ಆಡಿನ ಮೇಲೆ ನನಗೆ ತುಂಬಾ ಪ್ರೀತಿ ಇತ್ತು .ನಾನು ನನ್ನ ಅಕ್ಕ, ತಮ್ಮ ದಿನಾ ನಾಚಿಕೆ ಹುಲ್ಲು ಇರುವ ಕಡೆ ಹೋಗಿ ಅದನ್ನು ಮೇಯಿಸುತ್ತಿದ್ದೆವು .

ಒಮ್ಮೆ ಪ್ರೀತಿಯ ಕುಟ್ಟಿಯನ್ನು  ಕೊಡುವಂತೆ  ಕೇಳಿಕೊಂಡು ಓರ್ವರು ಬಂದರು . ಆಗ ನಮ್ಮ ತಂದೆ ಅದಕ್ಕೆ ಒಪ್ಪಿಕೊಂಡರು. ನಾವು ಆಗಲೇ  ಜೋರಾಗಿ ಕೂಗಲು ಶುರು ಮಾಡಿದೆವು .ಆಗ ನಮಗೆ ಮೂರು ಮಂದಿಗೂ  ತಂದೆ  ಐಸ್ ಕ್ಯಾಂಡಿ ಕೊಡಿಸಿದ್ದರು. ಮರುದಿನ ರಿಕ್ಷಾ ಬಂತು ಆಗ ಇದ್ದಿದ್ದು ಲ್ಯಾಂಬಿ ರಿಕ್ಷಾ .ಅದರ ಡಿಕ್ಕಿ ತೆರೆದು ಅದರಲ್ಲಿ ಮಲಗಿಸಿದರು .ನಾವೆಲ್ಲ ಜೋರು ಜೋರು ಕೂಗಿದ೦ತೆ  ಆದು ಕೂಡ  ಬೊಬ್ಬೆ ಹಾಕುತಿತ್ತು . ನೋಡುತಿದ್ದಂತೆಯೇ  ರಿಕ್ಷಾ ಸೀದಾ ಹೋಯಿತು. ಆ ಕ್ಷಣದ ಬೇಸರ ಈಗಲೂ ಒಮ್ಮೊಮ್ಮೆ ಕಾಡುವುದುಂಟು. ನನಗೆ ಪ್ರಾಣಿಗಳ ಬಗ್ಗೆ ಪ್ರೀತಿಯಿದೆ.ಅನುಕಂಪವಿದೆ .ಆಡುಗಳನ್ನು ಮಾರಿದ ಬಳಿಕ ನಮ್ಮ ಮನೆಯಲ್ಲಿ  ನಾಯಿ ಮತ್ತು ಬೆಕ್ಕು ಹೊರತು ಪಡಿಸಿ ಬೇರೆ ಸಾಕು ಪ್ರಾಣಿಯನ್ನು ಸಾಕುವುದಿಲ್ಲ . ಆಡಿನ ಒಡನಾಟ ಈಗ ಬರೀ ನೆನಪಾಗಿ ಮಾತ್ರ ಇದೆ .