Wednesday, January 25, 2017

ಕೈ ಚೀಲಕ್ಕೆ 5ವರ್ಷ ಆಯಿತು!!

ರಾಜ್ಯ ಸರಕಾರ ಎಲ್ಲ ರೀತಿಯ ಪ್ಲಾಸ್ಟಿಕ್ ಬ್ಯಾಗ್ ಗಳ ನಿಷೇಧ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿರುವ ಸಂಗತಿ.ಆದರೂ ನಗರದ ಕೆಲವು ಕಡೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಅಲ್ಲಲ್ಲಿ ಕಂಡುಬರುತ್ತಿದೆ. ಮೊನ್ನೆ ನಾನು ಕೇಂದ್ರ ಮಾರುಕಟ್ಟಿಯತ್ತ ಹೋಗಿದ್ದೆ. ಕೆಲವರು ಸಾಮಾನ್ಯ ಪ್ಲಾಸ್ಟಿಕ್ ನಲ್ಲಿ ಮಾರುಕಟ್ಟೆಯಿಂದ ತರಕಾರಿಗಳನ್ನು ವಿಶೇಷವಾಗಿ ಹಣ್ಣುಗಳನ್ನು ಖರೀದಿಮಾಡಿಕೊಂಡು ಹೋಗುತ್ತಿದ್ದರು.ಬಹುತೇಕ ಯುವ ಸಮುದಾಯ ಹೆಚ್ಚಾಗಿತ್ತು .ಈ ನಡುವೆ ಹಿರಿಯರೋರ್ವರು ತರಕಾರಿ ಸೊಪ್ಪು ಖರೀದಿಸಲು ಬಂದಿದ್ದನ್ನು ನಾನು ಗಮನಿಸಿದೆ.ಅವರು ಬರೀ ಕೈಯಲ್ಲಿ ಬಂದಿರಲಿಲ್ಲ .ಕೈ ಚೀಲ ತಂದಿದ್ದರು. "ಚೀಲ ಬಾರಿ ಮಲ್ಲೆ ಉಂಡತ್ತಾ"(ಚೀಲ ತುಂಬಾ ದೊಡ್ಡದಿದೆಯಲ್ಲಾ?) ಎಂದು ತುಳುವಿನಲ್ಲಿ ನಾನು ಕೇಳಿದಕ್ಕೆ ಅವು ಇನಿ ಕೋಡೆದವು ಅತ್ತ್ ಈ ಚೀಲೊಗು ಐನ್ ವರ್ಸ ಕರೀಂಡ್ (ಅದು ಇಂದು ನಿನ್ನೆಯದಲ್ಲ ಈ ಕೈ ಚೀಲಕ್ಕೆ ಐದು ವರ್ಷ ಆಯಿತು) ಎಂದರು.ಅವರ ಹೆಸರು ಊರು ಕೇಳುವುದಕ್ಕೂಆ ಸಂದರ್ಭದಲ್ಲಿ ಆಗಿಲ್ಲ!
ನಿಜವಾಗಿ ಈ ಹಿರಿಯರೋರ್ವರ ಮಾತು ಮತ್ತು ಅವರ ಪರಿಸರ ಕಾಳಜಿ ನನಗೆ ತುಂಬಾ ಇಷ್ಟವಾಯಿತು .ಈಗಿನ ಜಾಯಮಾನದ ಜನರೆಲ್ಲ ಶಾಪಿಂಗ್ ಹೋಗಬೇಕಾದರೆ ಅಭ್ಯಾಸ ಬಲದಿಂದ ಬರೀ ಕೈಯಲ್ಲಿ ಹೋಗುವ ಕಾಲ. ಒಂದೊಂದು ವಿಧದ ವಸ್ತು,ತರಕಾರಿಗಳಿಗೆ ಒಂದೊಂದು ಪ್ಲಾಸ್ಟಿಕ್ ಚೀಲದ ಜೊತೆಗೆ ಮನೆ ಸೇರುತ್ತಾರೆ. ನಗರದ ಕೆಲವು ಅಂಗಡಿಗಳ ಮಾಲೀಕರು, ಗ್ರಾಹಕರಿಗೆ ಖಡಕ್ ಆಗಿ ಪ್ಲಾಸ್ಟಿಕ್ ಚೀಲ ಇಲ್ಲವೇ ಇಲ್ಲ ಎನ್ನುತ್ತಾರೆ .


ಕೆಲವು ಮಾಲೀಕರು ಗ್ರಾಹಕರಿಗೆ ಪರ್ಯಾಯವಾಗಿ ಬಟ್ಟೆ ಚೀಲಗಳನ್ನು ಒದಗಿಸುತ್ತಿದ್ದಾರೆ. ಮತ್ತೆ ಕೆಲವರು ತಮ್ಮಲ್ಲಿರುವ ಚೀಲಗಳನ್ನೇ ಕೊಟ್ಟು, 'ಪುನಃ ತಂದುಕೊಡಬೇಕು' ಎಂದು ಸಲಹೆ ನೀಡುತ್ತಿದ್ದಾರೆ. ಬೇಕರಿಗಳಲ್ಲಿ ಚೀಲದ ಬದಲು ಕಾಗದದ ಬ್ಯಾಗ್ ಬಳಕೆಯಾಗುತ್ತಿದೆ.ಇತ್ತೀಚೆಗೆ ಮಂಗಳೂರು ಮಹಾ ನಗರ ಪಾಲಿಕೆ ವತಿಯಿಂದ ಪ್ಲಾಸ್ಟಿಕ್ ನಿರ್ಮೂಲನೆ ಜಾಗೃತಿ ಆಂದೋಲನ ನಡೆಸಲು, ಬಟ್ಟೆ ಚೀಲ ವಿತರಿಸಲು ಮುಂದಾಗಿ. ಸಾಮಾನ್ಯ ಸಭೆಯಲ್ಲಿ ಮೇಯರ್ ಬಟ್ಟೆ ಚೀಲ ಬಿಡುಗಡೆ ಮಾಡಿ, ಪಾಲಿಕೆ ಸದಸ್ಯರಿಗೆ ಹಸ್ತಾಂತರಿಸಿರುವ ಕಾರ್ಯ ನಡೆದಿತ್ತು. ಪ್ರಥಮ ಹಂತದಲ್ಲಿ 15,000 ಬಟ್ಟೆಯ ಚೀಲವನ್ನು ಶಾಲೆ ಮಕ್ಕಳ ಮುಖಾಂತರ ಮಂಗಳೂರು ಪಾಲಿಕೆ ವ್ಯಾಪ್ತಿಯ ಮನೆ ಮನೆಗೆ ತಲುಪಲು ಕ್ರಮ ಕೈಗೊಳ್ಳಲಾಗಿದೆ.ಇದು ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ.
ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ, ತಯಾರಿಕೆ, ಮಾರಾಟ ಹಾಗೂ ಉಪಯೋಗ ಸಂಪೂರ್ಣ ನಿಷೇಧವಿದ್ದರೂ ಬಳಕೆಯಾಗುತ್ತಿದೆ .ಇಲ್ಲಿ ನಮ್ಮ ಪ್ರತಿ ಸಾರಿಯ ಚಾಲಿಯಂತೆ ಸರಕಾರವನ್ನು,ಅಂಗಡಿ ಮಾಲಿಕರನ್ನು,ನಗರಾಡಳಿತವನ್ನು ದೂರಿ ಪ್ರಯೋಜನವಿಲ್ಲ . ಸಾರ್ವಜನಿಕರು ಬಳಸುವುದಿಲ್ಲ ಎಂದರೆ, ಅಂಗಡಿ ಮಾಲಿಕರು ಕೊಡುವುದೇ ಇಲ್ಲ .ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ ಹಾಗೂ ಮಂಗಳೂರನ್ನು ಸ್ವಚ್ಛ ನಗರವಾಗಿ ಮಾಡಲು ನಾವೆಲ್ಲರೂ ಕೈ ಜೋಡಿಸಬೇಕಿದೆ. ಸ್ತ್ರೀಶಕ್ತಿ ಸಂಘಗಳು, ಮಹಿಳಾ ಸಂಘಟನೆಗಳು, ಹೊಲಿಗೆ ಕಲಿತಿರುವವರು ಕೈ ಚೀಲಗಳನ್ನು ಹೊಲಿದು ಅಂಗಡಿಗಳಿಗೆ ಮಾರಾಟ ಮಾಡಿದರೆ ಸಣ್ಣ ಬದಲಾವಣೆಯಾದರೂ ನಿರೀಕ್ಷಿಸಬಹುದು.

No comments:

Post a Comment