Friday, December 30, 2016

ಹೊಸ ಬಗೆಯಲಿ ಬರಲಿ… ಸುಖ ಸಾವಿರ ತರಲಿ

ಹೊಸ ವರ್ಷ ಎಂದಾಗ ಸ್ವಭಾವಿಕವಾಗಿ ಹೊಸತು ಎನ್ನುವ ಭಾವನೆ ಹಲವರದು. ಆದರೆ ಕಾಲದ ಕೈ ಗಡಿಯಾರದಲ್ಲಿ ಬದುಕುವ ಇಂದಿನ ಜನರ ಬದುಕೆ ವಿಚಿತ್ರ. ಹೊಸ ವರುಷಕ್ಕೆ ಹಿಂದೆ ಬರುತ್ತಿದ್ದ ಗ್ರೀಟಿಂಗ್ ಕಾರ್ಡುಗಳು ಈಗ ಅಂಚೆಯಲ್ಲಿ ಬರುವುದಿಲ್ಲ .ಏನಿದ್ದರೂ ವಾಟ್ಸಪ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಫಾರ್ವರ್ಡ್ ಸಂದೇಶಗಳು ಬಂದು ಸೇರಿಕೊಳ್ಳುವ ಕಾಲ. ದಿನಾ ಸೂರ್ಯ ಮುಳುಗಿ ಮತ್ತೆ ಉದಯಿಸುವ ಸ್ವಭಾವಿಕ ಅಂಶದ ಒಂದು ಪರಿಕಲ್ಪನೆ ಅಥವಾ ಇನ್ನೊಂದು ಕಲ್ಪನೆಯೇ ಹೊಸ ವರ್ಷ ಅಥವಾ ಹೊಸ ದಿನ .ಅದರಲ್ಲೂ ದಿನದ ಬೀಳ್ಕೊಡುಗೆ ಮತ್ತು ಸ್ವಾಗತ ದ ನೆಪದಲ್ಲಿ ನಡೆಯುವ ವಿಭಿನ್ನ ಕಾರ್ಯಕ್ರಮಗಳು ಗಲ್ಲಿಗೊಂದರಂತೆ ಹೊಸತನದಿಂದ ಕೂಡಿರುತ್ತದೆ.ಈ ನಡುವೆ ಹೊಸ ವರ್ಷ ದ ಹೆಸರಿನಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಸಾರ್ವಜನಿಕರು ಹಾಗೂ ಯುವಕರು ಮಧ್ಯ, ಧೂಮಪಾನ ಸೇವಿಸಿ, ಪಟಾಕಿ ಸಿಡಿಸಿ, ಚೀರಾಡುತ್ತಿರುವುದು ಕಣ್ಣಿಗೆ ಕಾಣುವ ಸತ್ಯ. ಹೊಸ ದಿನಗಳ ಹೆಸರಲ್ಲಿ ಸಮಾಜದ ಸ್ವಾಸ್ಥ್ಯ ಕದಡುವ ಆತಂಕ ಎದುರಾಗಿದ್ದು, ಕಾನೂನುಬದ್ದಗೊಳಿಸಬೇಕೆಂಬುದು ಹಲವರ ಒತ್ತಾಸೆ .ಹೊಸ ವರ್ಷಾಚರಣೆ ನಮ್ಮ ದೇಶದ ಸಂಸ್ಕೃತಿಯಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಗೆ ನಮ್ಮ ದೇಶದ ಯುವಕರು ಮಾರು ಹೋಗಿರುವುದು ಇದರಿಂದ ತಿಳಿಯುತ್ತದೆ. ಡಿಸೆಂಬರ್ 31 ಕೊನೆಯ ದಿನದಂದು ಇದುವರೆಗೆ ಖರ್ಚು ಮಾಡದಷ್ಟು ಬಂಡವಾಳ ಹಾಕಿ ಅರಿವಿಲ್ಲದ ಸಂಭ್ರಮ ಮಾಡುವವರ ಸಂಖ್ಯೆ ಹೆಚ್ಚಾಗಿದೆ.ತನ್ನ ಮನೆಗೆ ಇದುವರೆಗೆ ಕೊಂಡು ಹೋಗದ ಆಹಾರ ತಿನಿಸುಗಳನ್ನು ಎಲ್ಲೋ ಕಾಣದ ಜಾಗದಲ್ಲಿ ಮಧ್ಯರಾತ್ರಿಯಲ್ಲಿ ಸೇರಿಕೊಂಡು ಹಂಚಿ ತಿನ್ನುತ್ತಾರೆ. ಆದರೆ ನಿತ್ಯ ಬದುಕುವ ಜನರಿಗೆ ಹೊಸತನದ ಹುಚ್ಚು ಇಲ್ಲ. ಕೈ ಗೆ ಸಂಬಳದ ರೂಪದಲ್ಲಿ ಹೊಸ ಗರಿ ಗರಿ ನೋಟುಗಳು ಸಿಗುತ್ತಾವೆ ಹೊರತು ಹೊಸ ಕೆಲಸ ಯಾರು ಕೊಡುವುದಿಲ್ಲ ಮತ್ತು ಯಾರು ಅಪೇಕ್ಷೆಸಿಸುವುದಿಲ್ಲ ಕೂಡ.
ಹೊಸ ವರ್ಷ ಎಂದ ಮಾತ್ರಕ್ಕೆ ಯಾರು ಹೊಸ ಚಾಪೆ,ಹೊಸ ಬೆಡ್ ಶೀಟ್ ನಲ್ಲಿ ಮಲಗುವುದಿಲ್ಲ.ಹೊಸ ಅಕ್ಕಿಯ ಪ್ಯಾಕೆಟ್ ತೆರೆದು ಅನ್ನ ಬೇಯಿಸುವುದಿಲ್ಲ! ಹಳೆಯ ಪಾತ್ರೆಯಲ್ಲೆ ಅಡುಗೆ. ಆಸ್ಪತ್ರೆಯಲ್ಲಿ ರೋಗಿಗೆ ಹೊಸ ಬೆಡ್ ಅಥವಾ ಹೊಸ ಮದ್ದುಗಳನ್ನು ನೀಡುವುದಿಲ್ಲ .ಹಳೆಯ ಖಾತೆಯಲ್ಲಿ ಹಣ ಜಮೆ!!ಹೀಗೆ ಆಳವಾಗಿ ಯೋಚಿಸಿದರೆ ಹೊಸವರ್ಷದಲ್ಲಿ ನವ ಅಥವಾ ಹೊಸತು ಪರಿಕಲ್ಪನೆಗೆ ಅರ್ಥವೇ ಇರುವುದಿಲ್ಲ .ಹೊಸ ಕ್ಯಾಲೆಂಡರ್ ಎದುರಿನ ಗೋಡೆಯಲ್ಲಿ ನೇತು ಹಾಕಿದರೂ ಇರುವ ಕಣ್ಣಿನಲ್ಲೇ ನೋಡಬೇಕು ಹೊರತು ಹೊಸ ಕಣ್ಣು ಇಟ್ಟು ನೋಡಲಾಗುತ್ತದೆಯೆ? ಗಡಿಯಾರದ ಮುಳ್ಳಿನಲ್ಲಿ ಏನೂ ವ್ಯತ್ಯಾಸ ಆಗುವುದಿಲ್ಲ ಅದೂ ಬ್ಯಾಟರಿ ಮುಗಿದರೆ ಮಾತ್ರ ನಿಲ್ಲುತ್ತದೆ! ,
ಈಗೀನ ಜಾಯಮಾನದ ಹೊಸ ಬದಲಾವಣೆಯೆಂದರೆ ವಾಟ್ಸ್ ಪ್ ನಲ್ಲಿ ಹೊಸ ರೀತಿಯಲ್ಲಿ ಫೋಸ್ ಕೊಟ್ಟು ಡಿ.ಪಿ ಹಾಕುವುದು.ಹೊಸ ಹೆಸರಿನ ಅಮಲು ಪದಾರ್ಥ ಸೇವಿಸಿವುದು. ಹೊಸ ಹುಡುಗ ಅಥವಾ ಹುಡುಗಿಗೆ ಲವ್ ಪ್ರಪೋಸ್ ಮಾಡೊದು. ಹೊಸ ಮೊಬೈಲ್ ಖರೀದಿ ಹೀಗೆ ಒಟ್ಟಿನಲ್ಲಿ ಏನಾದರೂ ಹೆಸತು ಬೇಕೆ ಬೇಕು ಎನ್ನುವ ಮನಸ್ಥಿತಿ.
 1935ರಲ್ಲಿ ರಾಷ್ಟ್ರಕವಿ ಕುವೆಂಪು ಹೇಳಿದ ’ಮನುಜ ಮತ ವಿಶ್ವಪಥ’ ನನಗೆ ನೆನಪಾಗುತ್ತಿದೆ
, ಬನ್ನಿ, ಸೋದರರೆ, ಬೇಗ ಬನ್ನಿ!
ಗುಡಿ ಚರ್ಚುಮಸಜೀದಿಗಳ ಬಿಟ್ಟು ಹೊರಬನ್ನಿ,
ಬಡತನವ ಬುಡಮುಟ್ಟ ಕೀಳಬನ್ನಿ,
ಮೌಢ್ಯತೆಯ ಮಾರಿಯನ್ನು ಹೊರದೂಡಲೈ ತನ್ನಿ,
ವಿಜ್ಙಾನ ದೀವಿಗೆಯ ಹಿಡಿಯ ಬನ್ನಿ.
, ಬನ್ನಿ, ಸೋದರರೆ, ಬೇಗ ಬನ್ನಿ!
ಕುವೆಂವುರವರು ಆ ಕಾಲಕ್ಕೆ ’ಗುಡಿ ಚರ್ಚುಮಸಜೀದಿಗಳ ಬಿಟ್ಟು ಹೊರಬನ್ನಿ ಬಡತನವ ಬುಡಮುಟ್ಟ ಕೀಳಬನ್ನಿ, ಎಂದು ಹೇಳಿದರು ನಿಜ, ಆದರೆ  ಮೌಢ್ಯತೆಯಲ್ಲೆ ಬದುಕುತ್ತಿರುವ  ಜನರಿಗೆ ಇದು ಸಾಧ್ಯವೆ? ತನ್ನ ಕವಿತೆಯಲ್ಲಿ ಮುಂದು ವರಿಸುತ್ತಾ ಮತದ ಮತದ ಹಳೆಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ ಎಂಬುದಾಗಿ ಬರೆದಿರುವುದನ್ನು ಗಮನಿಸಬಹುದು. ನಿತ್ಯ ಬದುಕಿನಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೊಸ ವರ್ಷ ಅಲ್ಲದಿದ್ದರೂ ಜಾತಿ,ಧರ್ಮ ,ರಾಜಕೀಯಕ್ಕೆ ಪೂರಕವಾದ ಹೊಸ ಸುದ್ದಿಗಳು ಬರುತ್ತಾ ಇರುತ್ತದೆ.ಮಾತ್ರವಲ್ಲ ಹೊಸತರದ ಸಮಸ್ಯೆಗಳಿಗೆ ಹೊಸ ಅಪರಿಚಿತ ಮುಖಗಳ ಮೇಲೆ ಧ್ವೇಷ ಹುಟ್ಟುವಂತೆ ಮಾಡುತ್ತದೆ.  ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು ತನ್ನ ಕವಿತೆಯೊಂದರಲ್ಲಿ ಹೊಸ ಬಗೆಯಲಿ ಬರಲಿ… ಸುಖ ಸಾವಿರ ತರಲಿ… ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ   ಎಂದು ಬರೆದಿರುವುದು ಸಕಾಲಕ್ಕೆ ಎಂಬುದು ತಿಳಿಯುತ್ತದೆ .,ನಮ್ಮ ದೇಹದ ಭಾಗಗಳನ್ನು ನಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಲು ಆಯ್ಕೆಗಳಿದ್ದರೆ  ಮೊನ್ನೆ ನೋಟಿನ ಸಮಸ್ಯೆ ಮತ್ತು ಚಿಲ್ಲರೆ ಸಮಸ್ಯೆ ಯ ಹಾಗೆ ಪ್ರತಿ ಹೊಸ ವರ್ಷಕ್ಕೆ ದೇಹದ ಬಿಡಿ ಭಾಗಗಳ ಕೊರತೆಯಾಗುತ್ತಿತ್ತು! ಹೊಸ ವರ್ಷದಿಂದ ಹೊಸ ಮನುಷ್ಯ ಎಂದು ನಾವು ಭಾವಿಸಿದರೂ ಸಮಾಜ ನಮ್ಮನ್ನು ಸ್ವೀಕರಿಸದು.ಯಾಕೆಂದರೆ ನಮ್ಮ ವ್ಯಕ್ತಿತ್ವದ ಬಗ್ಗೆ ಕೊಂಚವಾದರೂ ಹಲವರಿಗೆ ತಿಳಿದಿರುತ್ತದೆ.ಸಮಾಜಕ್ಕೆ ಹೊಸತನ್ನು ನೀಡುವ,ಹೊಸ ಬದಲಾವಣೆ ತರುವ ಪ್ರಯತ್ನ ಆಗಬೇಕು. ನಮ್ಮ ಸಂತೊಷಕ್ಕೆ ಹೊಸ ದಿನವನ್ನು ಆಚರಿಸುವುದು ತಪ್ಪಲ್ಲ. ಆದರೆ ಮತ್ತೊಬ್ಬರಿಗೆ ತೊಂದರೆ ಕೊಡುವ ಪರಿಸ್ಥಿತಿ ನಿರ್ಮಾಣವಾಗುವುದಾದರೆ ಅದನ್ನು ಕೈ ಬಿಡುವುದು ಒಳಿತು. ಕಲಿಕೆಯ ಹಂತದಲ್ಲಿರುವ ಯುವ ಮನಸ್ಸುಗಳು ಇಂದು ಹಿರಿಯರಿಗೆ ಹಾಗಲ್ಲ ಇದು ಹೀಗೆ ಎಂದು ಬುದ್ದಿವಾದ ಹೇಳುವ ಕಾಲ ಬಂದಿದೆ. ಹಾಗಿರುವಾಗ ಹೊಸತನವೆಂದರೆ ನಿತ್ಯ ಆಡುವ ಭಾಷೆಯಲ್ಲಿ ಶುದ್ಧಾಂಗವಾಗಿ ಪದ ಬಳಕೆ ಮಾಡುವುದು. ಗುಣಾತ್ಮಕ ಅಂಶಗಳನ್ನು ಬಾಚಿಕೊಳ್ಳುವುದು. ಹಳೆಯ ದಿನಗಳು ಕಳೆಯಿತು ಎಂದು ಸಂಭ್ರಮಿಸಿ ಇನ್ನೂ ಬರುವುದೆಲ್ಲವೂ ಒಳಿತನ್ನು ತರುತ್ತದೆ ಎಂಬುದು ಭ್ರಮೆ ಮಾತ್ರ. ಪ್ರಯೋಗಶೀಲ ಮತ್ತು ಬದಲಾವಣೆಗೆ ಒಪ್ಪುವ ಮತ್ತು ಬದುಕಿಗೆ ಹತ್ತಿರವೆಣಿಸುವ ವಿಷಯವಾದರೆ ಸಾಂಗವಾಗಿ ಫಲ ನೀಡಿತು. ಇಂದು ಮತ್ತು ನಾಳೆಯ ಕನಸುಗಳ ನಡುವೆ ಎರಡು ಕನಸುಗಳ ಜೊತೆ ಬದುಕಬೇಕು . ಹೊಸತನದ ಬಯಕೆಯಲಿ ಜೀವನ ಪಥ ಬದಲಾಯಿಸುವುದು ಸರಿಯಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಬದುಕನ್ನು ಅನುಭವಿಸುವುದು ಒಳ್ಳೆಯದಲ್ಲವೆ?.

No comments:

Post a Comment