Tuesday, July 26, 2016

ತುಳುವರ ಸಂಸ್ಕೃತಿಯ ಬಿಂಬ ಆಟಿ

"ಆಟಿ ಆನೆಡ್ ಪೋಪುನು ಸೋಣ ಕುದುರೆಡ್ ಪೋಪುನು." ಇದು ನಮ್ಮ ಹಿರಿಯರ ಅನುಭವದ ಮಾತು . ತುಳುವರಲ್ಲಿ ಆಟಿ ಅಂದರೆ "ಆಷಾಢ' . ತಿಂಗಳಿನಲ್ಲಿ ಮದುವೆ ,ಗೃಹ ಪ್ರವೇಶ ,ಹೊಸಮನೆಯ ತಯಾರಿ,ಹೊಸ ಜಾಗ ಖರೀದಿ ಯಾವುದೇಶುಭ ಕಾರ್ಯಗಳು ನಡೆಯುವುದಿಲ್ಲ .ಎಲ್ಲದಕ್ಕೂ ಆಷಾಢ  ತಿಂಗಳು ಕಳೆಯಲಿ ಎನ್ನುವ ಉತ್ತರ . ಮಳೆಗಾಲಕ್ಕೆ ತಯಾರಿಸಿದ ಹಪ್ಪಳ, "ಸಾಂತಣಿ' ಹಲಸಿನ ತೊಳೆಯನ್ನು, ಮಾವಿನ ಕಾಯಿಗಳನ್ನು ಉಪ್ಪು ನೀರಿನಲ್ಲಿ ನೆನೆಸಿಟ್ಟು ಶೇಖರಿಸಿದ "ಉಪ್ಪಡಚ್ಚಿಲ್‌', "ನೀರ್ಕುಕ್ಕು' ತಿನಸುಗಳನ್ನು ಮಳೆಗಾಳಕ್ಕೆಂದು ತಯಾರಿಸಿ ಇಡುತ್ತಾರೆ . ಅದನ್ನು ಆಟಿ ತಿಂಗಳಿನಿಂದ ಬಳಕೆ ಮಾಡಲು ಶುರು ಮಾಡುತ್ತಾರೆ. ಅರಶಿನಎಲೆಯ ತಿಂಡಿ, ಹಪ್ಪಳ, ಪಾಯಸ,ಎಳೆಯ ಬಿದಿರಿನ ಉಪ್ಪಿನಕಾಯಿ, ತಜಂಕ್ ಪಲ್ಯ,ಆಟಿ ತಿಂಗಳ ವಿಶೇಷ ತಿನಿಸುಗಳು . ಆಟಿಯಲ್ಲಿ ತಾರಯಿದ ಗಂಜಿ  ಮಾಡುವ ಪದ್ಧತಿಯೂ ಇದೆ. ಇದು ತಮಿಳರ ಪೊಂಗತಿಯ ಖಾದ್ಯವೆಂದು ಕೆಲವರ ಅಭಿಪ್ರಾಯ.
ಆಷಾಢ ಮಾಸದಲ್ಲಿ ಮನೆಯ ಅಂಗಳಕ್ಕೆ ಇಳಿಯದ ಪರಿಸ್ಥಿತಿ .ಬೀಸುವ ಗಾಳಿಯೊಂದಿಗೆ ಬಿಡದೆ ಸುರಿಯುವ ಮಳೆ .ತೋಟದ ಕೆಲಸವಂತೂ ಇರುವುದೇ ಇಲ್ಲ . ಸಮಯದಲ್ಲಿ ಯಾವುದೇ ಕೆಲಸ ಇಲ್ಲದ ಕಾರಣಕ್ಕಾಗಿ ಕೆಲವರು ಮೀನು ಹಿಡಿಯಲು ಹೋಗುವುದುಂಟು. ಆದರೆ ಸೊಪ್ಪು ತರಕಾರಿಗಳಿಗೆ ಹೆಚ್ಚಿನ ಆದ್ಯತೆಯನ್ನುಈ ಸಮಯದಲ್ಲಿ  ನೀಡುವುದನ್ನು ಗಮನಿಸಬಹುದು. ಆಟಿ ತಿಂಗಳಿನಲ್ಲಿ ತೀರಿಕೊಂಡ ಹಿರಿಯನ್ನು ನೆನಪಿಸಿಕೊಳ್ಳುವ(ಆಟಿ ಬಳಸುನು) ಕಾರ್ಯಕ್ರಮಗಳು ನಡೆಯುತ್ತವೆ .ಕೆಲವೊಮ್ಮೆ ಅಡುಗೆ ಹಾಳಾದರೆ ಆತ್ಮಗಳು ಅಡುಗೆಯ ರುಚಿ ನೋಡಿ ಹೋಗಿರುತ್ತಾರೆ ಎಂಬೆಲ್ಲ ನಂಬಿಕೆಗಳು ಈಗಲೂ ಇದೆ .ಬಡಿಸುವ ಸಮಯದಲ್ಲಿ ಹೊಸ ಬಟ್ಟೆ ಯನ್ನು ಜೊತೆಗೆ ಇಡುವುದನ್ನು ನಾನು ಗಮನಿಸಿದ್ದೇನೆ .ಆದರೆ ಹಿರಿಯರನ್ನು ನೆನಪಿಸಿಕೊಳ್ಳುವ ನೆಪದಲ್ಲಿ ಮದ್ಯಪಾನವನ್ನುಇಡುವುದು ,ಜೊತೆಗೆ ಸೇವನೆ ಮಾಡುತ್ತಿರುವುದು  ಕಣ್ಣೆದುರಿನ ಸತ್ಯ. ಇದಕ್ಕೆ ನಮ್ಮವರು ಮಂಗಳ ಆಡಬೇಕಿದೆ.ಅಡುಗೆ ತಯಾರಾದ ಕೂಡಲೇ ಬೇರಾರಿಗೂ ಬಡಿಸದೆ ಹಿರಿಯರಿಗಾಗಿ ಎಂದು ಬಡಿಸಿ ಸ್ವಲ್ಪಹೊತ್ತು ಬಿಟ್ಟವ ಪದ್ಧತಿಯೂ ಚಾಲ್ತಿಯಲ್ಲಿದೆ.ಇದೇ ಸಮಯದಲ್ಲಿ ಕುಲೆತ ಮದಿಮೆ (ಪ್ರೇತ ಮದುವೆ) ಕೂಡ ನಡೆಯುತ್ತದೆ.ತೆಂಗಿನ ಮರದ ಒಣಗಿದ ಹಾಳೆಗೆ ಬಡಿಯುತ್ತಾ ಮದುವೆ ಮಾಡುತ್ತಾರೆ ಎಂಬುದನ್ನು ಹಿರಿಯಾರದ ಬೊಳ್ಳೆ ಅವರ ಅನುಭವದ ಮಾತುಜನಪದ ಆಚರಣೆಗೆ ಸೇರಿಕೊಂಡಿರುವ ಆಟಿಕಳೆಂಜ ವೇಷ ವನ್ನು ಹಾಕುವುದು ಉಂಟು . ಸಾಂಪ್ರದಾಯಿಕ ನೃತ್ಯವನ್ನು ನಲಿಕೆ (ಭೂತಕೋಲದ ವೇಷ ಹಾಕುವವರು) ಸಮುದಾಯದವರು ಮಾಡುತ್ತಾರೆ. ಆದರೆ ಬೆಳ್ತಂಗಡಿ ತಾಲ್ಲೂಕಿನ ಮೇರರಲ್ಲಿ ಆಟಿ ಕಳೆಂಜ ವೇಷ ಹಾಕುವವರು ವಯಸ್ಕರು ಮತ್ತು ಕೈಯಲ್ಲಿ ದುಡಿ ಎನ್ನುವ ವಿಶೇಷ ವಾದ್ಯವನ್ನು ಹಿಡಿದು ನುಡಿಸುತ್ತಾ ಪಾಡ್ದನವನ್ನು ಹೇಳುತ್ತಾ ಕುಣಿಯುತ್ತಾರೆ ಎಂಬುವುದನ್ನು ಸಂಶೋಧಕ ಯದುಪತಿ ಗೌಡ ತಮ್ಮ ಪುಸ್ತಕವೊಂದರಲ್ಲಿ ಉಲ್ಲೇಖ ಮಾಡಿದ್ದಾರೆ . ಪ್ರದೇಶ ಹೊರತು ಪಡಿಸಿ ಬೇರೆಲ್ಲೂ ಮೇರ ಜನಾಂಗದವರು ಆಟಿ ಕಳೆಂಜದ ವೇಷವನ್ನು ಹಾಕುವುದಿಲ್ಲ .ಇದು ಅನುಭವಿ ಹಿರಿಯರ ಮಾತು. . ಹಿಂದಿನ ಕಾಲದ ಆಟಿ ಈಗೀನ ಜನರಿಗೆ ಸಿಕ್ಕಿಲ್ಲ . ಸರಿಯಾದ ಸಮಯಕ್ಕೆ ಮಳೆಯ ಅಬ್ಬರವಿಲ್ಲದ ಕಾರಣ ಸ್ವಲ್ಪ ಗೊಂದಲವೂ ಆಗಿದೆ . ಆಟಿ ಅಥವಾ ಆಷಾಡ ತಿಂಗಳಲ್ಲಿ ಬಿಸಿಲು ಕಾದರೆ ಆನೆಯ ಬೆನ್ನೂ ಬಿರಿಯುವುದೆಂಬುದಾಗಿ ತುಳುನಲ್ಲಿ ಗಾದೆಯಿದೆ. (ಆಟಿದ ದೊಂಬು ಆನೆತ ಬೆರಿ ಪುಡಪು).ಆದರೆ ಅತ್ತ ಮಳೆಯು ಇಲ್ಲ ಇತ್ತ ಬಿಸಿಲು ಇಲ್ಲದಾಗಿದೆ .


 ಆಟಿಕೂರುವುದು:-
 ಆಷಾಢ ಮಾಸದ ಸಮಯದಲ್ಲಿ ಹೊಸ ಮದು ಮಗಳಿಗೆ ಸಂತಸದ ಸಮಯವೂ ಹೌದು . ಏಪ್ರಿಲ್ ಮೇ ತಿಂಗಳಲ್ಲಿ ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣನ್ನು ಆಟಿ ತಿಂಗಳಲ್ಲಿ ತವರು ಮನೆಗೆ ಕರೆತರುವ ಪದ್ಧತಿ ಇದೆಇದಕ್ಕೆಆಟಿ ಕೂರುವುದು’(ಆಟಿ ಕುಲ್ಲುನಿ)ಎನ್ನುತ್ತಾರೆ .ಆಟಿ ತಿಂಗಳಲ್ಲಿ ಹೊಸದಾಗಿ ಮದುವೆಯಾದ ಹೆಣ್ಣು-ಗಂಡು ಜೊತೆಯಲ್ಲಿ ಇರಬಾರದು . ಬಡತನದ ಬೇಗೆಗೆ ಅದೇ ಸಮಯದಲ್ಲಿ ಮಗು ಹುಟ್ಟಿದರೆ ತೊಂದರೆ ಎಂಬ ಭಾವನೆಯಾಗಿರಬಹುದು ..  ತನ್ನ ತಾಯಿ ಮನೆಯಲ್ಲಿ ವಿಶೇಷ ಬೋಜನವಂತೂ ಇರುವುದು ಗ್ಯಾರಂಟಿ . ಒಂದು ದಿನ ಹುಡುಗನ ಕಡೆಯವರು ನಿಂತು ಬೋಜನ ಸ್ವೀಕರಿ ಹೋಗುವುದು ಹಾಗೆಯೇ ಹಾಗೆಯೇ ಶ್ರಾವಣ ಮಾಸದಲ್ಲಿ ಮದುಮಗಳನ್ನು ತನ್ನ ಗಂಡನ ಮನೆಗೆ ಕರೆದುಕೊಂಡು  ಹೋಗುವ ಸಮಯದಲ್ಲಿ ಅಲ್ಲಿಯು ಹುಡುಗಿಯ ಕಡೆಯವರು ಒಂದು ದಿನ ನಿಂತು ಸಂಪ್ರದಾಯವನ್ನು ಪಾಲಿಸುತ್ತಾ ಬಂದಿರುವುದನ್ನು ನಾನು ಗಮನಿಸಿದ್ದೇನೆ.

ಆಟಿ ಅಮವಾಸ್ಯೆ:-

ಆಟಿ ಅಮವಾಸ್ಯೆ ದಿನ  ಹಾಲೆಮರ(ಸಪ್ತಪರ್ಣಮರ) ತೊಗಟೆಯನ್ನು ಜಜ್ಜಿ ಅದರ ರಸ ಕುಡಿಯುವ ಸಂಪ್ರದಾಯ ಕರಾವಳಿಯಲ್ಲಿ ಈಗಲೂ ಇದೆ. ಮರದಲ್ಲಿ ಆಟಿ ತಿಂಗಳ ಹದಿನೆಂಟನೇ ದಿನ (ಅಮವಾಸ್ಯೆದ ದಿನ) ಹದಿನೆಂಟು ಬಗೆಯ ಔಷಧಿಯ ಗುಣ ಸೇರುತ್ತವೆ ಎಂಬುದನ್ನು ಹಿರಿಯರು ಒತ್ತಿ ಹೇಳುತ್ತಾರೆ . ಮರದ ತೊಗಟೆಯನ್ನು ಮುಂಜಾನೆ  ಬಿಸಿಲ ಕಿರಣ ಬೀಳುವ ಮೊದಲು ಸಂಗ್ರಹಿಸಬೇಕು. ಸೂರ್ಯನ ಬೆಳಕು ಬಿದ್ದರೆ ಔಷಧೀಯ ಗುಣ ನಾಶವಾಗುತ್ತದೆ ಎಂಬುದು ಹಿರಿಯರ ಬಲವಾದ ನಂಬಿಕೆ. ಇದರ ರಸ ಕಹಿಯಾಗಿದ್ದು, ದೇಹದಲ್ಲಿರುವ ರೋಗಾಣುಗಳನ್ನು ಇದು ನಾಶ ಮಾಡುತ್ತದೆ. ಹಾಗಾಗಿ ಆಟಿ ಹದಿನೆಂಟನೇ ದಿನ ತುಳುವರಿಗೆ  ವಿಶೇಷ ದಿನ.

ಕಿಸ್ಕಾರದ(ಕೇಪುಳ )ಹೂವು ಯಾರ ಕಣ್ಣಿಗೂ ಬೀಳುವುದಿಲ್ಲ .ಅಂದರೆ ಆಗುವುದಿಲ್ಲ . ನಮ್ಮ ತುಳು ಜನರು ಕಿಸ್ಕಾರ ಹೂವು ಕೂಡ ತನ್ನ ತಾಯಿ ಮನೆಗೆ ಹೋಗುತ್ತದೆ ಎನ್ನುವ ನಂಬಿಕೆಯನ್ನು ಈಗಲೂ ಉಳಿಸಿಕೊಂಡು ಬಂದಿದ್ದಾರೆ.

ಆಧುನೀಕತೆ ಬೆಳೆಯುತ್ತಿದ್ದಂತೆ ತಲತಲಾಂತರಗಳಿಂದ ಬೆಳೆದು ಬಂದ ಆಚಾರ-ವಿಚಾರಗಳು ಮರೆಯಾಗುತ್ತಿದೆಯೋ ಎಂಬ ಭಯ ಇಂದಿನ ದಿನಗಳಲ್ಲಿ ಕಾಡುತ್ತಿದೆ. ಹಳ್ಳಿಯಲ್ಲಿ ಬೇಸಾಯ ಮಾಡಿ ಜೀವನ ನಡೆಸುತ್ತಿದ್ದ ಜನಕ್ಕೆ ಈಗ ದುಡಿಯಲು ಶಕ್ತಿ ಇಲ್ಲ .ಹೊಸ ತಲೆಮಾರಿನ ಯುವಕ ಯುವತಿಯರು ನಗರಗಳತ್ತ  ಮುಖಮಾಡಿ ಆಧುನಿಕ ಜೀವನ ಶೈಲಿಯತ್ತ ಸಾಗಿದ್ದಾರೆ . ಆಟಿ  ಶುರುವಾದರೂ ಗದ್ದೆ ಕೆಲಸ ಇನ್ನೂ  ಸಮರ್ಪಕವಾಗಿ ಸಾಗಿಲ್ಲ. ಆದರೂ ಕೆಲವೊಂದು ಸಂಘ ಸಂಸ್ಥೆಗಳು ಆಟಿ ಸಂಪ್ರದಾಯಗಳನ್ನು ಇಂದಿನ ಯುವಜನಾಂಗಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ .ಮತ್ತೊಂದು ಸಂಗತಿಯೆಂದರೆ ,ಆಟಿಯ ತಿನಸಿನಲ್ಲಿ ಕೋಳಿ ಪದಾರ್ಥ ಬಂದಿದೆ. ಇದೆಷ್ಟು  ಸರಿ? ಅಬ್ಬರದ ಆಚರಣೆಯಿಂದ ಕೂಡಿದ ಕಾರಣಕ್ಕೆ ಆಡಂಬರ ಎಂಬ ಮಾತು ಕೇಳಿ ಬರುತ್ತಿದೆ . ಈಗ ಎಲ್ಲ ಕಡೆಗಳಲ್ಲಿ ಆಷಾಢ ಮಾಸದ ಕಾರ್ಯಕ್ರಮಗಳು ಬಹಳ ಸಂಭ್ರಮದಿಂದ ನಡೆಯುವಾಗ ಕಷ್ಟದ ತಿಂಗಳು ಎಂದು ಕರೆಯುವು ದಾದರು ಹೇಗೆ ? ಕರಾವಳಿಯ ವಿಶೇಷ ತಿಂಗಳಾದ ಆಟಿ ಇಂತಹ ಹಲವಾರು ವಿಶೇಷತೆಗಳಿಂದ ವಿಶಿಷ್ಟವಾಗಿದೆ. ಇಂತಹ ಸಂಪ್ರದಾಯ ಬದಲಾದ ಕಾಲಘಟ್ಟದಲ್ಲಿ  ಬದಲಾದರೂ,ಕಾಲದ ಜೊತೆ ಹೊಂದಿಕೊಂಡು ನಾವು  ನೈಜತೆಯೆನ್ನು ಉಳಿಸಿಕೊಂಡು ಮುಂದುವರಿಯಬೇಕಿದೆ . ಆಟಿಯ ವಿಶೇಷ ತಿಂಡಿತಿನಿಸುಗಳನ್ನು ಸವಿಯಲು ನಾವೆಲ್ಲಾ ತಯರಾಗೋಣ.





No comments:

Post a Comment