Sunday, August 21, 2016

ನೀರಿನಲ್ಲಿ ಮಕ್ಕಳ ಈಜಾಟ

ಶಾಲೆ-ಕಾಲೇಜಿಗೆ ರಜೆ ಸಿಕ್ಕಿತೆಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂತೋಷ .ಮಕ್ಕಳಿಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದರೂ ನೀರಿನಲ್ಲಿ ಕಸರತ್ತು ಮಾಡುವುದಕ್ಕೆ ಎಲ್ಲರೂ ರಡಿ ಇರುತ್ತಾರೆ . ತಮ್ಮ ಮನೆ ಅಥವಾ ಸಂಬಂಧಿಕರ ಪರಿಸರದಲ್ಲಿ  ಹರಿಯುವ ನದಿ, ಕಾಲುವೆ, ಹೊಳೆ,ಕೆರೆ ಸಿಕ್ಕಿದರೆ  ಮೋಜಿನಿಂದ ಈಜಲು ಅಥವಾ ನೀರಿನಲ್ಲಿ ಆಟವಾಡಲು ಹೋಗುವುದು ಮಾಮೂಲಿ . ಆದರೆ ಕೆಲವೊಮ್ಮೆ  ಗುಂಡಿಯಲ್ಲಿ ಬಿದ್ದು ಆಯ ತಪ್ಪಿ ಹೀಗೆ ವಿವಿಧ ಕಾರಣಗಳಿಂದ ನೀರಿನಲ್ಲಿ ಮುಳುಗಿ  ಅನೇಕರು ಸಾವನ್ನಪ್ಪುತ್ತಿರುವ  ವಿಚಾರ ಆಗಾಗ ಸುದ್ದಿಯಾಗುತ್ತಿದೆ .ಮುಖ್ಯವಾಗಿ ಹೊಸದಾಗಿ ಈಜಲು ಹೋಗಿ ಕಲಿತವರು ಹರಿಯುವ ನೀರಿನಲ್ಲಿ ಈಜಲು ಹೋಗಿ ನೀರಿನ ರಭಸಕ್ಕೆ ತೇಲಿ ಹೋಗಿರುವ ಘಟನೆಗಳು ಈಗ ಹೆಚ್ಚಾಗುತ್ತಿವೆ .ಈಜು ದೇಹಕ್ಕೆ ಒಂದು ಒಳ್ಳೆಯ  ವ್ಯಾಯಾಮವಾದರೂ  ಈಜಾಡುವಾಗ ಕಸರತ್ತು ಮಾಡುವುದು ಬೇಡ. ಇನ್ನು ಈಜು ಕಲಿಯುವ ಹಂತದಲ್ಲಿರುವವರು,ವಿದ್ಯಾರ್ಥಿಗಳು, ಯುವಕರು, ಏಕಾಏಕಿ ನೀರಿಗೆ ಹಾರಿ ತನ್ನ ಸಾಮರ್ಥ್ಯವನ್ನು  ಇತರರ ಎದುರಿಗೆ ಪ್ರದರ್ಶಿಸುವುದು ಸರಿಯಲ್ಲ. ಅನುಭವಿ ಈಜು ಕಲಿತವರೊಂದಿಗೆ ಕಲಿತರೆ ಹೆಚ್ಚು ಭದ್ರತೆ ಮತ್ತು ಅನುಕೂಲವಾದೀತು.

ಇಂದಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಮತ್ತು ತಂತ್ರಜ್ಞಾನದಲ್ಲಿ ಎಷ್ಟೇ ಈಜಿದರೂ ನೀರಿನಲ್ಲಿ ಈಜಲು ಬರುವುದಿಲ್ಲ! ನಿತ್ಯ ಬದುಕಿನಲ್ಲಿ ಬದುಕಲು ಕಷ್ಟವಾಗುತ್ತಿದೆ. ಹೊಳೆಯಲ್ಲಿ  ಗುಂಪಿನಲ್ಲಿ ಈಜುವಾಗ ಹೆಚ್ಚಾಗಿ ಪೈಪೋಟಿ ನಡೆಯುವುದುಂಟು.ಅವನಿಗಿಂತ/ಅವಳಿಗಿಂತ ಮುಂದೆ ಹೋಗಬೇಕು.ಇನ್ನೊಂದು ದಡವನ್ನು ಸೇರಿ ಗುರುತಿಸಿಕೊಳ್ಳಬೇಕು ಎಂದು. ಈ ರೀತಿಯ ಸ್ಪರ್ಧೆ ಒಳ್ಳೆಯದಲ್ಲ. ನಾನು ನೋಡಿದ ಹಾಗೆ ಕೆಲವರು ಹೊಳೆಯ ದಡದ ಬಂಡೆ ಕಲ್ಲಿನ ಮೇಲೆ ನಿಂತು ಉಲ್ಟಾ ಹಾರುತ್ತಾರೆ. ಎತ್ತರದಿಂದ  ಧುಮುಕುವಾಗ ಅಡಿ ಭಾಗದಲ್ಲಿ ಕಲ್ಲು ಇದ್ದರೆ ತಲೆಗೆ ಅಥವಾ ಕೈ ಗೆ ಪೆಟ್ಟು ಆಗುವ ಅವಕಾಶ ಜಾಸ್ತಿ ಇರುತ್ತದೆ.  ಹಳ್ಳಿ ವಾತಾವರಣದಲ್ಲಿ  ಬೆಳೆದ ಮಕ್ಕಳು ಹೆಚ್ಚಾಗಿ ಈಜು ಗೊತ್ತಿರುವವರೇ ಆಗಿರುತ್ತಾರೆ.  ಆದ್ರೆ ಇತ್ತೀಚೆಗಿನ ದಿನಗಳಲ್ಲಿ ಈ ರೀತಿ ನಿರೀಕ್ಷೆ ಮಾಡಲಾಗದು .ಈಗೀಗ ಶಾಲಾ ಆವರಣದಲ್ಲಿ, ಹೊಸದಾಗಿ ನಿರ್ಮಾಣವಾಗಿರುವ  ಫ಼್ಲಾಟ್ ಗಳಲ್ಲಿ ಈಜುಕೊಳ ಇದ್ದೇ ಇದೆ.


ಇನ್ನೊಂದು ಸಂಗತಿಯೆಂದರೆ ಯಾರೂ ಇಲ್ಲದ ಸಮಯದಲ್ಲಿ ಅಥವಾ ಒಂಟಿಯಾಗಿ ನೀರಿಗೆ ಇಳಿಯುವುದು ಸರಿಯಲ್ಲ. ನೀರು, ಬೆಂಕಿ ,ಗಾಳಿ ಇವುಗಳ ಜತೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ . ನೀರಿನಲ್ಲಿ  ಮಸ್ತ್ ಮಜಾ  ಬೇಡ. ಪಾಲಕರು ಕೂಡ ತಮ್ಮ ಮಕ್ಕಳಿಗೆ ಈಜಿನ ಬಗ್ಗೆ ತಿಳುವಳಿಕೆ ನೀಡಿದರೆ ಉತ್ತಮ

ಮಿತಿ ಮೀರಿದ ಧ್ವನಿಯಲ್ಲಿ ಕರ್ಕಶ ಸೈರನ್‌

ನಗರದ ಆಸ್ಪತ್ರೆ, ಕೋರ್ಟ್‌ ಶಾಲಾ ವಠಾರ ಇತ್ಯಾದಿ ಪ್ರದೇಶದಲ್ಲಿ ಕರ್ಕಶ ಹಾರ್ನ್ ಹಾಕಬಾರದೆಂಬ ನಿಯಮವಿದೆ . ನಿಯಮ ಪಾಲಿಸದೆ ಇದ್ದರೆ ಹಾರ್ನ್ ಗಳನ್ನು ತೆಗೆಯುವ ಹಾಗೂ ದಂಡ ಹಾಕುವ ಕಾನೂನು ಕ್ರಮವನ್ನು ಕೈಗೊಳ್ಳವ ಅಧಿಕಾರ ಸಂಚಾರಿ ವಿಭಾಗದವರಿಗೆ ಇದೆ . ಕರ್ಕಶ ಹಾರ್ನ್ ಮೊಳಗಿಸಿ ಸಾರ್ವಜನಿಕರಿಗೆ ಕಿರಿ ಕಿರಿ ಉಂಟುಮಾಡುವ ಖಾಸಗಿ ಬಸ್ಸುಗಳಿಗೆ ಎಚ್ಚರಿಕೆ ನೀಡಿದ ಸಂದರ್ಭವನ್ನು ನಾನು ನೋಡಿದ್ದೆನೆ .ಆದರೆ ಇಂದು ಮಧ್ಯಾಹ್ನ ಹಂಪನಕಟ್ಟೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು .ನಾನು ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದೆ. ಆ ಸಮಯದಲ್ಲಿ ಸರ್ಕಾರದ ನಾಮ ಫಲಕವಿದ್ದ ಕೆಂಪು ಗೂಟದ ಕಾರು ನಗರದ ಟೌನ್ ಹಾಲ್ ನಿಂದ ಬಾವುಡಗುಡ್ದೆಯ ವರೆಗೆ ಮಿತಿ ಮೀರಿದ ಧ್ವನಿಯಲ್ಲಿ ಕರ್ಕಶ ಸೈರನ್‌ ಹಾಕುತಿತ್ತು 
.ಟ್ರಾಫಿಕ್ ಜಾಮ್ ಎಂದು ಅದರೊಳಗೆ ಇದ್ದ ಚಾಲಕ ಮತ್ತು ಮಹಾನಿಯರಿಗೂ ಗೊತ್ತಿದೆ .ಇದು ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲವೇ? ರಾಜಕಾರಣಿ ಅಥವಾ ಸರ್ಕಾರಿ ವಾಹನಕ್ಕೆ ಪ್ರತ್ಯೇಕ ನಿಯಮವಿದೆಯೇ? ಬೇಲಿಯೆ ಎದ್ದು ಹೊಲ ಮೇಯುತ್ತಿದೆ...... ಇಂಥ ಸೈರನ್‌ಗಳು ಆ್ಯಂಬುಲೆನ್ಸ್, ಪೊಲೀಸ್, ಅಗ್ನಿಶಾಮಕ ವಾಹನಗಳು ಮತ್ತು ಆರ್ಮಿ ವಾಹನಗಳಲ್ಲಿ ಮಾತ್ರ ಬಳಕೆಯಾಗಬೇಕು . ಕಾರುಗಳಿಂದ ಮೊಳಗುವ ಸೈರನ್ ಬಗ್ಗೆಯೂ ಕೋರ್ಟ್ ಕಿಡಿಕಾರಿದನ್ನು ಇಲ್ಲಿ ಉಲ್ಲೇಖಿಸುತ್ತೆನೆ. ಟ್ರಾಫಿಕ್ ನಿಯಮ ಗಾಳಿಗೆ ತೂರುವ ಅದರಲ್ಲೂ ಅನಗತ್ಯವಾಗಿ ಗೂಟದ ಕಾರು ಬಳಸುವವರ ವಿರುದ್ಧ 10 ಸಾವಿರದ ವರೆಗೆ ದಂಡ ವಿಧಿಸುವ ಸಂಬಂಧ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಕೋರ್ಟ್ ಸೂಚನೆ ನೀಡಿರುವುದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು.

ಹೊರ ಜಿಲ್ಲೆಯ ಪೋಲಿಸರ ಜೊತೆ ತುಳುವಿನಲ್ಲಿ ಮಾತುಕತೆ

 ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿಗಳಿಗೆ ಸುಲಲಿತವಾಗಿ ಕರ್ತವ್ಯ ನಿರ್ವಹಿಸಲು ತುಳು ಭಾಷೆ ಕಲಿಕಾ ತರಬೇತಿಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿ ಸಭಾಂಗಣದಲ್ಲಿ ಮೊನ್ನೆ 10 ದಿನಗಳ ಕಾಲ ಆಯೋಜಿಸಲಾಗಿತ್ತು. .ಸದ್ರಿ ಕಾರ್ಯಾಗಾರದಲ್ಲಿ ಮಂಗಳೂರು ನಗರದ 22 ಸಿಬ್ಬಂದಿಗಳು ಭಾಗವಹಿಸಿದ್ದರು. ತುಳು ಕಲಿಕೆ ಕಾರ್ಯಗಾರದಲ್ಲಿ ಭಾಗವಹಿಸಿದ ಕೆಲವು ಪೊಲೀಸರನ್ನು ನಾನು ಮಾತಾಡಿಸಿದೆ.ಯಾವುದೇ ಸಂಕೊಚವಿಲ್ಲದೆ ಆಪ್ತವಾಗಿ ತುಳುವಿನಲ್ಲಿ ಮಾತಿಗೆ ಆರಂಭಿಸಿದರು. ಇನ್ನು ಕೆಲವರು ಆಲೋಚಿಸಿ ಮಾತಾಡಿದರು. ಓರ್ವ ಸಿಬ್ಬಂದಿಗೆ ಕುಡ್ಲದಲ್ಲಿ ಪೊಲೀಸ್ ಸೇವೆಗೆ ಸೇರಿದಾಗ ತುಳು ಭಾಷೆ ಬಾರದೆ ಕೆಲಸವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದರಂತೆ!.ಈಗ ಸುಧಾರಿಸಿಕೊಂಡಿದ್ದಾರೆ.

ಹೊರ ಜಿಲ್ಲೆಯಿಂದ ಬಂದಿರುವ ಪೊಲೀಸರು ತುಳು ಭಾಷೆಯ ಬಗ್ಗೆ ಅಭಿಮಾನ ಮಾತ್ರವಲ್ಲದೆ,ಭಾಷೆಯನ್ನು ಕಲಿಯಲು ಆಸಕ್ತಿಯನ್ನು ಹೊಂದಿದ್ದಾರೆ.ತುಳುವಿನಲ್ಲಿ ದಾನೆಂಬೆ,ಮಂಡೆ ಸಮ ಇಜ್ಜ,ವನಸ್ ಆಂಡಾ?,ಶಬ್ಧಗಳು ಇವರಿಗೆ ಬಹಳ ಇಷ್ಟ.ತಮ್ಮ ತಮ್ಮ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಜೊತೆ ಮಾತನಾಡಿ ಅಭ್ಯಾಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಜೊತೆಗೆ ವಾಟ್ಸಪ್ ನಲ್ಲಿ ಗ್ರೂಪ್ ಮಾಡಿಕೊಂಡು ಮಾತು ಕತೆ ವಿನಿಮಯ ಮಾಡಿಕೊಳ್ಳುತ್ತಾರೆ.
ಪೊಲೀಸರು ಜನ ಸ್ನೇಹಿಯಾಗಲು ಸ್ಥಳೀಯ ಭಾಷೆಯೂ ಕಾರಣವಾಗುತ್ತದೆ ಎಂಬುದನ್ನು ಮನಗಂಡು ತುಳು ಕಲಿಕೆಯ ಬಗೆಗೆ ಮನಸು ಮಾಡಿದ Chandra sekhar M IPS
Commissioner of Police,K M Shantharaju KSPS
DCP (L & O)ಹಾಗೂ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳು.
ಇದು ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಮಾತ್ರ ಸೀಮಿತವಾಗಿರದೆ, ಹೊರ ಜಿಲ್ಲೆಗಳಿಂದ ಬಂದಿರುವ ಇತರ ಇಲಾಖೆಗಳಲ್ಲಿ ಇರುವವರು ತುಳು ಕಲಿತರೆ ಅನುಕೂಲವಾಗುತ್ತದೆ.ಉದಾ:-ಮಂಗಳೂರಿನ ಸೆಂಟ್ರಲ್ ರೈಲು ನಿಲ್ಧಾಣದ ಸಿಬ್ಬಂದಿಗಳಿಗೆ ತರಬೇತಿ ನೀಡಿದರೆ ಮಲಯಾಲಂ ದಬ್ಬಾಲಿಕೆ ಕಮ್ಮಿಯಾಗಬಹುದು!
ಬಲೆ ತುಳು ಕಲ್ಪಾಗ ತುಳು ಭಾಷೆ ಒರಿಪ್ಪಗಾ!!

Friday, August 19, 2016

ಒಮ್ಮೆಯಾದರೂ ನಗಬಾರದೆ?


‪‎ಸತ್ಯ‬ ದರ್ಶನ‬ :- ತಂದೆ‬ ನಿರ್ಮಾತೃ.ಮಕ್ಕಳಿಗೆ ತಂದೆ ಯ ಬಗ್ಗೆ ಎಷ್ಟು ಕಾಳಜಿ ಇದೆಯೋ ಗೊತ್ತಿಲ್ಲ. ಆದರೆ ಮೊನ್ನೆ ಕಾರ್ಯಕ್ರಮವೊಂದಕ್ಕೆ ಮುಲ್ಕಿಯತ್ತ ಬಸ್ಸಿನಲ್ಲಿ ಪ್ರಯಾಣಿಸುತಿದ್ದೆ.ಸುರತ್ಕಲ್ ನಲ್ಲಿ ತುಂಬಾ ಸಮಯ ಬಸ್ಸು ನಿಂತಿತ್ತು.ತನ್ನ ಮಗಳನ್ನು ಬಸ್ಸಿನಲ್ಲಿ ಬಿಡಲು ಆಕೆಯ ತಂದೆಯು ಬಂದಿದ್ದರು.ಲಗೇಜು-ಬ್ಯಾಗು ಎಲ್ಲವನ್ನು ತಂದೆಯೇ ಬಸ್ಸಿನೊಳಗೆ ಹಾಕಿದರು .ಬಸ್ಸು ಹೊರಡುವುದನ್ನೆ ಆಕೆಯ ತಂದೆ ಕಾಯುತ್ತಿದ್ದರು.ಬಸ್ಸು ಹೊರಟಾಗ ಮಗಳು ದೂರವಾಗುತ್ತಾಳೆ ಅನ್ನುವ ಕೊರಗೊ ಗೊತ್ತಿಲ್ಲ ಕಣ್ಣಂಚಿನಲ್ಲಿ ಕಣ್ಣಿರು ಸುರಿಯುತಿತ್ತು.


ಆ ಹುಡುಗಿ ಸೀಟಲ್ಲಿ ಕುಳಿತು ಮೊಬೈಲ್ ಒತ್ತಲು ಶುರು ಮಾಡಿದಳು.ಆದರೆ ಮಗಳ ಮುಖದಲ್ಲಿ ಮುಗುಳು ನಗೆಯ ಭಾವ,ವ್ಯತ್ಯಾಸ ನಾನು ಕಾಣಲೇ ಇಲ್ಲ.ಮಗಳು ಸುರಕ್ಷಿತವಾಗಿ ನಿಗದಿತ ಜಾಗಕ್ಕೆ ತಲುಪಲಿ ಎಂದು ಮನದೊಳಗೆ ಹಾರೈಸುವ ತಂದೆಯ ಮನಸು ಇಂದಿನ ಮಕ್ಕಳಿಗೆ ಅರ್ಥವಾಗುವುದಿಲ್ಲವೆ? ತಂದೆಯ ಪ್ರೀತಿ,ಕಾಳಜಿಗೆ ಒಂದು ಕ್ಷಣವಾದರೂ ಬೆಲೆ ಕೊಡಬಾರದೆ? ಸದಾ ನಮ್ಮ ಜೊತೆಗಿರುವ ಮೊಬೈಲ್ ಎಲ್ಲವನ್ನು ನೀಡದು, ಜೊತೆಗಿರದ ತಂದೆಯೆ ಹೆಚ್ಚು ಮಗಳ ಬಗ್ಗೆ ಕನಸು ಕಾಣುತ್ತಾ ತನ್ನ ಪ್ರಾಮಾಣಿಕ ಜವಾಬ್ದರಿಯನ್ನು ಮಾಡುತ್ತನೇ ಇರುತ್ತಾರೆ ಅನ್ನೋದು ಎಲ್ಲರಿಗೂ ನೆನಪಿರಲಿ.ಅಪರಿಚಿತರಿಗೆ ಮುಖ ತೋರಿಸಿ ಮಾತಾಡುವ ನಾವು ತಂದೆಯ ಮುಖ ನೋಡಿ ಒಮ್ಮೆಯಾದರೂ ನಗಬಾರದೆ?ಹೆತ್ತವರ‬ ಎದುರು ನಾವು ಮಕ್ಕಳಾಗಿಯೇ‬ ಇರಬೇಕು .